ಹುಬ್ಬಳ್ಳಿ: ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್, ಇದೀಗ ಸ್ವತಃ ಪಾಕಿಸ್ತಾನವೇ ಈ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿರುವಾಗ ಬಾಯಿ ಮುಚ್ಚಿಕೊಂಡಿರುವುದು ಏಕೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಳಿಕ ಮಾತನಾಡಿದ ಅವರು, ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಪುಲ್ವಾಮ ದಾಳಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರೂ ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಭಾರತದ ಪರವಾಗಿ ಒಳ್ಳೆಯ ಸುದ್ದಿ ಬಂದರೆ ಕಾಂಗ್ರೆಸ್ ನವರಿಗೆ ಸಂತಸ ತರುವುದಿಲ್ಲ. ಮೋದಿ ಅವರನ್ನು ವಿರೋಧ ಮಾಡುವ ಬರದಲ್ಲಿ ಭಾರತವನ್ನು ಏಕೆ ವಿರೋಧ ಮಾಡುತ್ತಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿ, ರಾಹುಲ್ ಗಾಂಧಿ ಪಾಕಿಸ್ತಾನದ ಪರವಾಗಿ ಮಾತನಾಡುವುದು ಅವರ ಬಾಲಿಷತನವನ್ನು ತೋರಿಸುತ್ತದೆ. ವೋಟಿಗಾಗಿ ಎಷ್ಟರ ಮಟ್ಟಿಗೆ ಕೀಳು ಮಟ್ಟಿಗೆ ಇಳಿಯುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.
ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಜಗದೀಶ್ ಶೆಟ್ಟರ್: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ನಗರದ ಗ್ಲಾಸ್ ಹೌಸ್ ನಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಿದರು.
ನಂತರ ಮಾತನಾಡಿದ ಅವರು, ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಎಲ್ಲ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಹೀಗಾಗಿ, ಅವರ ತತ್ತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.