ಹುಬ್ಬಳ್ಳಿ: ದರ್ಜಿ ವೃತ್ತಿಯೇ ಕುಲ ಕಸುಬಾಗಿರುವ ಭಾವಸಾರ ಕ್ಷತ್ರಿಯ ಸಮಾಜದವರು ಮತ್ತು ಟೈಲರಿಂಗ್ ವೃತ್ತಿಯನ್ನೇ ಅವಲಂಬಿಸಿರುವ ಇತರ ಸಮಾಜದವರೂ ಲಾಕ್‌ಡೌನ್ ಕಾರಣಕ್ಕೆ ಆರ್ಥಿಕವಾಗಿ ತೀವ್ರವಾಗಿ ನಲುಗಿ ಹೋಗಿದ್ದಾರೆ.
ಸಿದ್ಧ ಉಡುಪುಗಳನ್ನು ತೊಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಟೈಲರ್‌ಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಕೆಲವು ಖಾಸಗಿ ಶಾಲೆಗಳವರೂ ಗಾರ್ಮೆಂಟ್ಸ್‌ಗಳ ಜೊತೆಗೆ ನೇರವಾಗಿ ಒಪ್ಪಂದ ಮಾಡಿಕೊಳ್ಳುತ್ತಿರುವುದರಿಂದ ಸಮವಸ್ತ್ರ ಹೊಲಿಯುವುದಕ್ಕೂ ಕತ್ತರಿ ಬಿದ್ದಿದೆ.
ಈಗ ಕೊರೊನಾದಿಂದ ಆದಾಯವೇ ಇಲ್ಲದಂತಾಗಿದ್ದು, ಹೇಗೆ ಜೀವನ ಸಾಗಿಸಬೇಕು ಎಂಬುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಮದುವೆ ಮಹೂರ್ತಗಳು ಹೆಚ್ಚು. ಮದುವೆಗೆ ಹೊಸ ಬಟ್ಟೆ ಹೊಲಿಸುವುದರಿಂದ ಒಂದಷ್ಟು ಬೇಡಿಕೆ ಹೆಚ್ಚಾಗಿರುತ್ತಿತ್ತು. ಆದರೆ ದೇಶಾದ್ಯಂತ ಕೊರೊನಾದಿಂದಾಗಿ ಬಹುತೇಕ ಮದುವೆಗಳು ಮುಂದೂಡುತ್ತಿರುವುದರಿಂದ ಕೆಲಸವೇ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಟೈಲರ್‌ಗಳಿದ್ದು, ಆ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ರಾಜ್ಯ ಸರ್ಕಾರ ಪ್ರಕಟಿಸಿದ ಆರ್ಥಿಕ ಉತ್ತೇಜನ ಕೊಡುಗೆಯಲ್ಲಿ ನೆರವು ಇಲ್ಲದಿರುವುದು ಜೀವನೋಪಾಯಕ್ಕೆ ದರ್ಜಿ ವೃತ್ತಿಯನ್ನೇ ನೆಚ್ಚಿಕೊಂಡಿರುವ ಅಸಂಖ್ಯಾತ ಕುಟುಂಬಗಳಿಗೆ ತೀವ್ರ ನಿರಾಶೆ ಮೂಡಿಸಿದೆ. ಮಾನವೀಯ ನೆಲೆಯಲ್ಲಿ ತಮಗೂ ನೆರವು ನೀಡಬೇಕು ಎಂದು ಟೈಲರ್ ಪ್ರಶಾಂತ ಉಪಾಧ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ದರ್ಜಿ ಸಹಕಾರ ಮಹಾಮಂಡಳಿಯೂ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದೆ. ಲಾಕ್‌ಡೌನ್ ಭಾಗಶಃ ತೆರವಾಗಿದ್ದರೂ ತಕ್ಷಣಕ್ಕೆ ದುಡಿಮೆಯೇ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ದರ್ಜಿಗಳಿಗೂ ರಾಜ್ಯ ಸರ್ಕಾರ ಹಣಕಾಸು ನೆರವು ನೀಡಲು ಮುಂದಾಗಬೇಕಿದೆ ಎಂದರು.