ಹುಬ್ಬಳ್ಳಿ: ಅವಳಿ ನಗರದ ನಿವೇಶನ ರಹಿತ ಜನರಿಗೆ ನಿವೇಶನ ಕೊಡಲು ಹಿಂದೇಟು ಹಾಕುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಫೆ.14 ರಂದು ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ನಿವೇಶನ ರಹಿತರ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ನಾಗರಾಜ್ ಗುರಿಕಾರ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ ನಗರ, ಡಾ.ಲೋಹಿಯಾನಗರ, ಧಾರವಾಡ ಹೋರಾಟದ ಮೂಲಕವೇ ನಿರ್ಮಾಣವಾಗಿದ್ದು, ಗದಗನಲ್ಲಿಯೂ ಸಹ ಸಾವಿರಾರು ಮನೆಗಳ ನಿರ್ಮಾಣ ಆಗಿವೆ. ಆದರೆ ಬಹು ದಿನಗಳಿಂದ ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ನಿವೇಶನ ರಹಿತರನ್ನು ಕಡೆಗಣಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದರು.
ಇನ್ನು ಈ ಹಿನ್ನಲೆಯಲ್ಲಿ ಸಮಿತಿ ವತಿಯಿಂದ ಮುಂದಿನ ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸಲಾಗಿದ್ದು, ಅದರಂತೆ ಫೆ.14 ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಜಿಲ್ಲೆಯ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಮನೆಮುಂದೆ ಸಾಂಕೇತಿಕವಾಗಿ ಶಾಂತಿಯುತವಾಗಿ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಾರ್ಗದರ್ಶಕ ಪ್ರೋ.ಐ.ಜಿ.ಸನದಿ, ಗೌರವ ಸಲಹೆಗಾರ ನೀಲಕಂಠ ಅಸೂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.