ಹುಬ್ಬಳ್ಳಿ: ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ವ್ಯಾಪಾರಸ್ಥರ ಸಂಘ ಹಾಗೂ ಸಮತಾ ಸೇನೆ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಯಿಸಿತು.
ನಗರದ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಕಳೆದ 8 ತಿಂಗಳಿನಿಂದ ಆರ್ಥಿಕ ಸಂಕಷ್ಟದ ನಡುವೆಯೂ ಬೀದಿ ಬದಿ ವ್ಯಾಪಾರಸ್ಥರು ದಿನಕ್ಕೆ ನೂರರಿಂದ ನಾಲ್ಕು ನೂರು ರೂಪಾಯಿ ದುಡಿದು ಬದುಕುತ್ತಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ವ್ಯಾಪಾರಕ್ಕೆ ಸ್ಥಳಾವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ: ಧಾರವಾಡ: ಚರ್ಮ ಕುಟೀರ ತೆರವು ವಿರೋಧಿಸಿ ಪ್ರತಿಭಟನೆ
ನಮ್ಮ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ನಾಶ ಮಾಡುತ್ತಿದ್ದಾರೆ. ನಮ್ಮ ವಸ್ತುಗಳಿಗೆ ಬೇಕಾಬಿಟ್ಟಿ ದಂಡ ವಿಧಿಸುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಬೀದಿ ಬದಿ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿರುವ ಪಾಲಿಕೆ ಅಧಿಕಾರಿಯನ್ನು ವಜಾಗೊಳಿಸಿ ಕೂಡಲೇ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.