ಹುಬ್ಬಳ್ಳಿ: ಬಹುತೇಕ ಪಟ್ಟಣ, ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಇದೀಗ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದ್ದ ಮಹಾನಗರ ಪಾಲಿಕೆ ಕಣ್ಣು ಮುಚ್ಚಿ ಕುಳಿತಿದೆ ಎಂಬ ಆರೋಪಗಳು ಕೇಳಿಬಂದಿವೆ. ಪರಿಣಾಮ ಈಗ ಬಾಲಕರಿಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಪರಿಣಾಮ ಬಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿರುವ ಸ್ವರಾಜ್ ನಗರದಲ್ಲಿ ಅಮೀನುದ್ಧೀನ್ ಮುಲ್ಲಾ ಎಂಬ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಆತನ ಬಾಯಿಯ ಭಾಗಕ್ಕೆ ಶ್ವಾನಗಳು ಕಚ್ಚಿವೆ ಎಂದು ತಿಳಿದುಬಂದಿದೆ.
ಇನ್ನೋರ್ವ ಬಾಲಕನ ಮೇಲೆಯೂ ದಾಳಿ ಮಾಡಿದ್ದು, ಆ ಬಾಲಕನ ಮಾಹಿತಿ ಲಭ್ಯವಾಗಬೇಕಿದೆ. ಇನ್ನು, ಅವಳಿನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದ್ದರೂ ಕೂಡ ಸಂತಾನಹರಣ ಕಾರ್ಯಾಚರಣೆ ಮಾಡುವ ಪಾಲಿಕೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಬೀದಿ ನಾಯಿಗಳ ಉಪಟಳ ಹೆಚ್ಚಾಗಲು ಕಾರಣವಾಗಿದೆ ಅನ್ನೋದು ಸಾರ್ವಜನಿಕರ ಆಕ್ರೋಶದ ಮಾತಾಗಿದೆ. ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಓಡಾಡುವುದೇ ಕಷ್ಟವಾಗಿದ್ದು, ಬೀದಿ ನಾಯಿಗಳ ಹಾವಳಿಗೆ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರು ಭಯಭೀತರಾಗಿದ್ದಾರೆ.
ಭಿಕ್ಷುಕಿಯನ್ನು ಕೊಂದೇಬಿಟ್ಟವು ರಕ್ಕಸ ಬೀದಿ ನಾಯಿಗಳು: ಈ ತಿಂಗಳ ಶುರುವಿನಲ್ಲಿ ಧಾರವಾಡದಲ್ಲಿಯೇ ಭಿಕ್ಷುಕಿಯನ್ನು ಬೀದಿ ನಾಯಿಗಳು ಕೊಂದು ಹಾಕಿರುವ ಘಟನೆ ನಡೆದಿತ್ತು. ಜಿಲ್ಲೆಯ ಉಪ್ಪಿನಬೆಟಗೇರಿ ಗ್ರಾಮದ ಖಬರಸ್ತಾನ ಬಳಿ ರಾತ್ರಿ ಭಿಕ್ಷುಕಿ ಮಲಗಿದ್ದಾಗ ನಾಯಿಗಳ ಗುಂಪೊಂದು ಮೇಲರಗಿ ದಾಳಿ ಮಾಡಿದ್ದವು. ಪರಿಣಾಮ ಆಕೆಯ ತೊಡೆ, ಕೈಗಳಿಗೆ ಗಾಯವಾಗಿ, ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ಇದನ್ನೂ ಓದಿ: ಬೀದಿ ನಾಯಿಗಳ ಹಾವಳಿಗೆ ಧಾರವಾಡದಲ್ಲಿ ಭಿಕ್ಷುಕಿ ಬಲಿ
ಸೂರತ್ನಲ್ಲಿ 7 ವರ್ಷದ ಬಾಲಕಿ ಮೇಲೆ ದಾಳಿ: ಗುಜರಾತ್ನ ಸೂರತ್ನ ವಾಪೂಲ್ಪಡ ಅಶ್ವನಿ ಕುಮಾರ್ ಸೊಸೈಟಿಯಲ್ಲಿ ಪುಟ್ಟ ಬಾಲಕಿ ಮನೆಯ ಮುಂದಿನ ಗೇಟ್ ಹೊರಗೆ ಆಟ ಆಡುತ್ತಿದ್ದಾಗ ನಾಯಿಯೊಂದು ಅಲ್ಲಿಯೇ ಓಡಿ ಹೋಗಿತ್ತು. ಈ ಸಂದರ್ಭದಲ್ಲಿ ಬಾಲಕಿ ನಾಯಿಯನ್ನು ಅಟ್ಟಾಡಿಸಿದ್ದಳು. ಹೀಗಾಗಿ ನಾಯಿ ಬಾಲಕಿಯ ಮೇಲೆ ಎಗರಿ ಆಕೆಯನ್ನು ಕಚ್ಚಿತ್ತು. ಮಗುವಿನ ಕಿರುಚಾಟ ಕೇಳಿ ತಾಯಿ ಮನೆಯಿಂದ ಹೊರಗೆ ಬಂದಿದ್ದು, ತಮ್ಮ ಮಗಳನ್ನು ರಕ್ಷಣೆ ಮಾಡಿದ್ದರು. ಆದರೆ ಬಾಲಕಿಯ ಮುಖಕ್ಕೆ ಕಚ್ಚಿದ್ದರಿಂದ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.
ಬೇಸತ್ತ ಜನರಿಂದ 16 ನಾಯಿಗಳಿಗೆ ಗುಂಡೇಟು: ಬಿಹಾರದ ಬೇಗುಸರಾಯ್ನಲ್ಲಿ ಬೀದಿ ನಾಯಿಗಳಿಂದ 8 ಜನರು ಸಾವನ್ನಪ್ಪಿದ್ದರು. ಅಲ್ಲದೇ ಜನರು ಗಂಭಿರ ಗಾಯಗೊಂಡಿದ್ದರು. ಹೀಗಾಗಿ ಅಲ್ಲಿನ ಜನರು ನಾಯಿಗಳನ್ನು ಶೂಟೌಟ್ ಮಾಡಿ ಹತ್ಯೆ ಮಾಡಿದ್ದರು. ಇದರಿಂದ ಸ್ವಲ್ಪ ಮಟ್ಟಿಗೆ ಸಾರ್ವಜನಿಕರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿತ್ತು.
ಇದನ್ನೂ ಓದಿ: ಕೆಳಮನೆ 'ಪತ್ನಿ' ಮೇಲ್ಮನೆ 'ಗಂಡ'ಪರಾರಿ ಪ್ರಕರಣ: ವಕೀಲರ ಮೂಲಕ ಪೊಲೀಸರ ಮುಂದೆ ಹಾಜರಾದ ಮೇಲ್ಮನೆ ಗಂಡ