ಧಾರವಾಡ : ಧಾರವಾಡದ ವಿಧಿವಿಜ್ಞಾನ ಕ್ಯಾಂಪಸ್ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ಮಾಡಿದರು. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಶಾ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಅವರು ಕೇಂದ್ರ ಗೃಹ ಸಚಿವರಿಗೆ ಸಾಥ್ ನೀಡಿದರು.
ಧಾರವಾಡದಲ್ಲಿ ವಿಧಿವಿಜ್ಞಾನ ಕ್ಯಾಂಪಸ್ : ಬಳಿಕ ಕೃವಿವಿ ರೈತ ಜ್ಣಾನಾಭಿವೃದ್ದಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಕರ್ನಾಟಕ ರಾಜ್ಯದಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಬಹಳ ಪ್ರವಾಸ ಮಾಡಿದ್ದೇನೆ. ಎಲ್ಲ ಜಿಲ್ಲೆಗಳನ್ನು ನಾನು ನೋಡಿದ್ದೇನೆ. ಧಾರವಾಡ ಎಂದರೆ ವಿರಾಮದ ಸ್ಥಳ ಎಂದು ಅರ್ಥ. ಜಿಲ್ಲೆಯಲ್ಲಿ ಫಾರೆನ್ಸಿಕ್ ಆಗಿರುವುದು ಶಿಕ್ಷಣಕ್ಕೆ ಉಪಯುಕ್ತವಾಗಲಿದೆ ಎಂದರು. ಇನ್ನು ಈ ಕ್ಯಾಂಪಸ್ ಬರಲು ಜೋಶಿಯವರು ಕಾರಣ. ಈ ಬಗ್ಗೆ ಅವರು ನಮ್ಮ ಬೆನ್ನು ಬಿದ್ದಿದ್ದರು. ಭೂಮಿ ಇಲ್ಲ ಎಂದಾಗ ಒಂದೇ ದಿನ 50 ಎಕರೆ ಜಮೀನು ಕೊಟ್ಟರು. ಇದು 9ನೇ ಕ್ಯಾಂಪಸ್. ಸಿಎಂಗೆ ನಾನು ಸದ್ಯಕ್ಕೆ ತಾತ್ಕಾಲಿಕ ಕ್ಯಾಂಪಸ್ ಕೊಡಲು ಹೇಳಿದ್ದೇನೆ. ಸಿಎಂ ಇದಕ್ಕೆ ಒಪ್ಪಿದ್ದಾರೆ ಎಂದು ಹೇಳಿದರು.
2ನೇ ಬಾರಿ ಪ್ರಧಾನಿ ಆದ ಮೋದಿಯವರು ಗುಜರಾತ್ ಬಳಿಕ ಕರ್ನಾಟಕದಲ್ಲೂ ಕ್ಯಾಂಪಸ್ ಮಾಡಲು ನಿರ್ಧರಿಸಿದರು. ಇದು 6 ನೇ ಕ್ಯಾಂಪಸ್. ಇದಕ್ಕೆ ಶಿಲಾನ್ಯಾಸ ಆಗಿದೆ. ಇದರಲ್ಲಿ ಡಿಎನ್ಎ, ಕೃಷಿ ಸೇರಿ ಹಲವು ವಿಷಯಗಳ ಅಧ್ಯಯನ ನಡೆಯಲಿದೆ. ವಿದ್ಯಾರ್ಥಿಗಳು ಇದರ ಜ್ಞಾನ ಪಡೆದುಕೊಳ್ಳಬಹುದು ಎಂದು ಹೇಳಿದರು.
ವಿಧಿವಿಜ್ಞಾನ ಕ್ಯಾಂಪಸ್ನಿಂದ ದೇಶಕ್ಕೆ ಲಾಭ : ಈ ಮೂಲಕ ದೇಶದಲ್ಲಿ ಹೆಚ್ಚು ಫಾರೆನ್ಸಿಕ್ ವಿದ್ಯಾರ್ಥಿಗಳು ಇರಲಿದ್ದಾರೆ. ಇದು ವಿಭಿನ್ನ ವಿಶ್ವವಿದ್ಯಾಲಯ. ಇದರಿಂದ ದೇಶಕ್ಕೆ ಲಾಭ ಆಗಲಿದೆ. ಹವಾಲಾ, ನಕಲಿ ನೋಟು, ಮಹಿಳೆ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿವೆ. ಇವುಗಳನ್ನು ತನಿಖೆ ಮಾಡಲು ಇದನ್ನು ತರಲೇಬೇಕು ನಾನು ಗೃಹ ಮಂತ್ರಿಯಾದಾಗ ಅಂದುಕೊಂಡಿದ್ದೆ. ಇನ್ನು ದೇಶದೆಲ್ಲೆಡೆ ಕ್ಯಾಂಪಸ್ ಮಾಡಿದ ಮೇಲೆ ಸುಮಾರು 10 ಸಾವಿರ ಪರಿಣಿತರು ನಮಗೆ ಲಭ್ಯವಿರಲಿದ್ದಾರೆ ಎಂದು ಹೇಳಿದರು.
ಅಮಿತ್ ಶಾ ಆಧುನಿಕ ವಲ್ಲಭಭಾಯಿ ಪಟೇಲ್ : ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಅವರನ್ನು ಆಧುನಿಕ ವಲ್ಲಭಭಾಯಿ ಪಟೇಲ್ ಎಂದು ಹೊಗಳಿದರು. ರಾಜ್ಯಕ್ಕೆ ಎನ್ಎಫ್ಎಸ್ಎಲ್ ಅವಶ್ಯಕತೆ ಬಹಳ ಇದೆ. ಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ನಾವು ಮೊದಲು ಈ ಸೈಬರ್ ಕ್ರೈಂ ಗಳ ಬಗ್ಗೆ ಕೇಳಿರಲಿಲ್ಲ. ಸದ್ಯ ಹೆಚ್ಚು ಚಾಲ್ತಿಯಲ್ಲಿದೆ. ಕಾನೂನು ಮತ್ತು ಟೆಕ್ನಾಲಜಿಯಲ್ಲಿ ನಾವು ಬಹಳ ಮುಂದೆ ಇದ್ದೇವೆ. ಕ್ರೈಮ್ ಆದರೆ ಎಫ್ ಎಸ್ ಎಲ್ ವರದಿ ಬರುವುದು ತಡವಾಗುತ್ತಿದೆ. ಹೀಗಾಗಿ ನಾನು ಗೃಹ ಸಚಿವ ಇದ್ದಾಗ 2 ರೀಜಿನಲ್ ಸೆಂಟರ್ ಗಳನ್ನು ತೆರೆದಿದ್ದೆ ಎಂದು ಹೇಳಿದರು.
ಕ್ರೈಮ್ ಆದಾಗ ಸ್ಪೆಷಲ್ ಆಫೀಸರ್ಸ್ ಸ್ಥಳಕ್ಕೆ ಹೋಗಬೇಕು. ಅದು ಕೇವಲ ವಿದೇಶದಲ್ಲಿ ಮಾತ್ರ ಇದೆ. ಈಗ ನಮ್ಮ ರಾಜ್ಯದಲ್ಲೂ ಅದು ಬಂದಿದೆ. ಈ ಕ್ಯಾಂಪಸ್ ಧಾರವಾಡಕ್ಕೆ ಬಂದಿದ್ದು ಬಹಳ ಖುಷಿ ತಂದಿದೆ. ಇದು ಅಮಿತ್ ಶಾ ಅವರ ಕರ್ನಾಟಕದ ಮೇಲಿನ ಪ್ರೀತಿ ತೋರಿಸುತ್ತದೆ. ಇದು ಧಾರವಾಡಕ್ಕೆ ಬರಲಿಕ್ಕೆ ಪ್ರಹ್ಲಾದ್ ಜೋಶಿ ಮುಖ್ಯ ಪಾತ್ರವಹಿಸಿದ್ದಾರೆ. ಇದರ ಉಪಯೋಗ ಕರ್ನಾಟಕ ಸೇರಿ ಇತರ ರಾಜ್ಯಗಳಿಗೂ ಆಗಲಿದೆ ಎಂದರು.
ಕೇಂದ್ರ ಸಚಿವ ಜೋಶಿ ಮಾತನಾಡಿ, ವಲ್ಲಭಭಾಯಿ ಪಟೇಲರ ನಂತರ ಗೃಹ ಸಚಿವರ ಕಾರ್ಯ ಏನು ಎಂಬುದನ್ನು ಅಮಿತ್ ಶಾ ತೋರಿದ್ದಾರೆ. ಮೋದಿಯವರು ಪ್ರಧಾನಿ ಆದ ನಂತರ ಅನೇಕ ಪ್ರಥಮಗಳು ಆಗಿವೆ. ಜಗತ್ತಿನಲ್ಲೇ ಮೊದಲು ಫಾರೆನ್ಸಿಕ್ ವಿವಿ ಆಗಿದ್ದು ಗುಜರಾತ್ ನಲ್ಲಿ. ಇಲ್ಲಿ ಕಲಿತವರಿಗೆ ಕೆಲಸ ಗ್ಯಾರಂಟಿ. ಇನ್ನು ಇಲ್ಲಿ ಕ್ಯಾಂಪಸ್ ಬರಲು ಪ್ರಧಾನಿ ಮಾರ್ಗದರ್ಶನದಂತೆ ಅಮಿತ್ ಶಾ ಕೆಲಸ ಮಾಡಿದ್ದಾರೆ. ಈ ಜಾಗ ಕೊಟ್ಟ ಕೃಷಿ ವಿವಿಗೆ ಮತ್ತು ಸೂಚನೆ ಕೊಟ್ಟ ಸಿಎಂಗೆ ಧನ್ಯವಾದಗಳನ್ನು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ : ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು: ಕೇಂದ್ರ ಗೃಹ ಸಚಿವ ಅಮಿತ್ ಶಾ