ಧಾರವಾಡ: ನಾಲ್ವರು ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯರ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಚುನಾವಣಾ ಆಯೋಗದ ಆದೇಶಕ್ಕೆ ಹೈಕೋರ್ಟ್ ತಡೆ ಪಕ್ಷದ ವಿಪ್ ಉಲ್ಲಂಘಿಸಿದ ಹಿನ್ನೆಲೆ ಚುನಾವಣಾ ಆಯೋಗ ಜೂನ್ 10 ರಂದು ಈ ಆದೇಶ ನೀಡಿತ್ತು. ಜಿಲ್ಲಾ ಪಂಚಾಯತ್ ಸದಸ್ಯರಾದ ಅಣ್ಣಪ್ಪ ದೇಸಾಯಿ, ರತ್ನಾ ಪಾಟೀಲ್, ಮಂಜವ್ವ ಹರಿಜನ್, ಜ್ಯೋತಿ ಬೆಂತೂರು ಅನರ್ಹಗೊಂಡ ಬಿಜೆಪಿ ಸದಸ್ಯರಾಗಿದ್ದಾರೆ. ಫೆ. 5, 2019 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಅಂದಿನ ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಗೊತ್ತುವಳಿ ಪರ ನಾಲ್ವರು ಬಿಜೆಪಿ ಸದಸ್ಯರು ಮತ ಚಲಾಯಿಸಿದ್ದರು. ಇದರಿಂದ ಚೈತ್ರಾ ಶಿರೂರ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು.ಇದನ್ನರಿತ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಈ ಸದಸ್ಯರನ್ನು ಅನರ್ಹಗೊಳಿಸಿತ್ತು. ಆಯೋಗದ ತೀರ್ಪು ಪ್ರಶ್ನಿಸಿ ನಾಲ್ವರು ಹೈಕೋರ್ಟ್ ಮೊರೆ ಹೋಗಿದ್ದರು. ಧಾರವಾಡ ಹೈಕೋರ್ಟ್ನ ಏಕ ಸದಸ್ಯ ಪೀಠದಿಂದ ಆಯೋಗದ ಆದೇಶಕ್ಕೆ ಮಧ್ಯಂತರ ತಡೆ ನೀಡಲಾಗಿದೆ.