ಹುಬ್ಬಳ್ಳಿ: ನಗರದ ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ ಕೊರೊನಾ ಲಾಕ್ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡಿದ್ದು, ವಿಭಿನ್ನವಾಗಿ ಆನ್ಲೈನ್ ಶಿಕ್ಷಣ ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಸೇಂಟ್ ಅಂಥೋನಿ ಪಬ್ಲಿಕ್ ಸ್ಕೂಲ್ನ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎ.ಪ್ರಸಾದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಆಗದಂತೆ ಶಾಲೆಯ ಆಡಳಿತ ಮಂಡಳಿ ಎಚ್ಚರವಹಿಸಿದೆ. ಬೋಧನಾ ಪ್ರಕ್ರಿಯೆಯಲ್ಲಿ ಶಿಕ್ಷಕರ ಸಹಕಾರದಿಂದ ವರ್ಧಿತ (augmented) ರಿಯಾಲಿಟಿ, ಲೈಟ್ ಬೋರ್ಡ್ ಟೆಕ್ನಾಲಜಿ ಹಾಗೂ 3ಡಿ ತಂತ್ರಾಂಶ ಬಳಸಿಕೊಂಡು ಆನ್ಲೈನ್ ಶಿಕ್ಷಣ ನೀಡುತ್ತಿದ್ದೇವೆ ಎಂದು ಅವರು ವಿವರಿಸಿದರು.
ಕೊರೊನಾ ವೈರಸ್ ಸೋಂಕು ಎಲ್ಲೆಡೆ ವ್ಯಾಪಿಸಿದ ಪರಿಣಾಮ ಶಾಲಾ, ಕಾಲೇಜುಗಳು ಬಂದ್ ಆಗಿವೆ. ಆದರೆ ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಉಂಟಾಗಿದ್ದು, ಸರ್ಕಾರ ಕೂಡಾ ಆನ್ ಲೈನ್ ಶಿಕ್ಷಣ ನಡೆಸಲು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೇಂಟ್ ಅಂಥೋನಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ರೀತಿ ತೊಂದರೆ ಆಗದಂತೆ ತಂತ್ರಜ್ಞಾನ ಬಳಸಿ ಪ್ರತಿದಿನವೂ ವಿಷಯಕ್ಕೆ ಅನುಸಾರವಾಗಿ ಶಿಕ್ಷಕರು ವಿಡಿಯೋ ಮೂಲಕ ಪರಿಣಾಮಕಾರಿಯಾಗಿ ಬೋಧನೆ ಮಾಡುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ಹಾಗೂ ಭಯ ನಿವಾರಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಭಿನ್ನ ಕ್ರಿಯೆಯ ಮೂಲಕ ಮನೆಯಲ್ಲಿದ್ದರೂ ಸಹ ಶಾಲೆಯಲ್ಲಿ ಇರುವಂತೆ ವಿದ್ಯಾರ್ಥಿಗಳು ಕಲಿಕೆಯನ್ನು ಮುಂದುವರಿಸಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಇರುವ ತೊಡಕನ್ನು ದೂರವಾಗಲು ಸಹಾಯಕವಾಗಿದೆ. ಪೋಷಕರು ಸಹ ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದ್ದಾರೆ ಎಂದರು.
ಶಾಲೆಯ ವರ್ಧಿತ ರಿಯಾಲಿಟಿ ಟೆಕ್ನಾಲಜಿ ಮೂಲಕ ವಿದ್ಯಾರ್ಥಿಗಳಿಗೆ ವಿಷಯ ಹಾಗೂ ಮಾಹಿತಿಯನ್ನು ಶಿಕ್ಷಕರು ವಿಡಿಯೋ ಮೂಲಕ ಪರಿಣಾಮಕಾರಿಯಾಗಿ ತಿಳಿಸಲಾಗುತ್ತಿದೆ. ಆನೆಗಳ ಬಗ್ಗೆ ಹೇಳುವಾಗ ಪಕ್ಕದಲ್ಲೇ ಆನೆ, ಹುಲಿ ಬಗ್ಗೆ ಹೇಳುವಾಗ ಹುಲಿ ಹೀಗೆ ಪ್ರತಿ ವಿಷಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಬಳಸಿಕೊಂಡು ವರ್ಧಿತ ರಿಯಾಲಿಟಿ ಮೂಲಕ ಪಾಠ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆಯ ಕೊಠಡಿಯಲ್ಲಿ ಶಿಕ್ಷಕರು ಯಾವ ರೀತಿ ಪಾಠ ಪ್ರವಚನ ಮಾಡುತ್ತಾರೋ ಅದೇ ರೀತಿ ಲೈಟ್ ಬೋರ್ಡ್ ಟೆಕ್ನಾಲಜಿ ಬಳಸಿ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ ಎಂದರು.