ಧಾರವಾಡ: ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದ ಹಿನ್ನೆಲೆ ಶ್ರೀರಾಮಸೇನಾ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗಣಪತಿ ಮೂರ್ತಿ ಮಾಡುವ ಮೂಲಕ ಪ್ರತಿಭಟಿಸಿದರು. ಇದೇ ವೇಳೆ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಕೂರಿಸಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೋವಿಡ್ ಪ್ರಕರಣಗಳು ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಗಣಪತಿ ಹಬ್ಬದಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದ್ರೆ ನಮ್ಮ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಯಾವ ರೀತಿ ಬಾರ್, ಹೋಟೆಲ್ಗಳಿಗೆ ಕೋವಿಡ್ ನಿಬಂಧನೆಗಳನ್ನು ಹಾಕಿದೆಯೋ, ಅದೇ ರೀತಿ ಸಾರ್ವಜನಿಕ ಗಣಪತಿ ಮೂರ್ತಿ ಕೂರಿಸಲು ಮಾರ್ಗಸೂಚಿ ಮೂಲಕ ಅನುಮತಿ ನೀಡಬೇಕೆಂದು ಆಗ್ರಹಿಸಿದರು.
24 ಗಂಟೆಗಳಲ್ಲಿ ಸರ್ಕಾರ ತನ್ನ ನಿಲುವು ಬದಲಿಸಿ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ನಾವು ಗಣಪತಿ ಮೂರ್ತಿ ಕೂರಿಸುತ್ತೇವೆ. ನಮ್ಮನ್ನು ಬೇಕಾದ್ರೆ ಜೈಲಿಗೆ ಹಾಕಲಿ ಎಂದು ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಹರಿಹಾಯ್ದರು.