ಧಾರವಾಡ: ಕೊರೊನಾ 2ನೇ ಅಲೆ ಭೀತಿಯಿಂದಾಗಿ ಜಿಲ್ಲೆಯಲ್ಲಿ ನೋಡೆಲ್ ಅಧಿಕಾರಿಗಳ ನೇಮಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಕೋವಿಡ್-19 ಸಂಪರ್ಕ ಪತ್ತೆ ಹಚ್ಚುವಿಕೆ ಕೆಲಸ ಸಮರ್ಪಕವಾಗಿ ನಿರ್ವಹಿಸಲು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್. ಕುಮ್ಮಣ್ಣನ್ನವರ ಮತ್ತು ಪಶುಪಾಲನೆ ಇಲಾಖೆಯ ಮಾದರಿ ಸಮೀಕ್ಷೆ ಯೋಜನೆಯ ಸಹಾಯಕ ನಿರ್ದೇಶಕ ಕಂಟೆಪ್ಪಗೌಡರ ಅವರನ್ನು ನೇಮಿಸಲಾಗಿದೆ.
ಕಂಟ್ರೋಲ್ ರೂಂ ಕೆಲಸ ಕಾರ್ಯಗಳನ್ನು ನಿರ್ವಹಣೆ ಕುರಿತು ಉಸ್ತುವಾರಿಗಾಗಿ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ನೇಮಕವಾಗಿದ್ದಾರೆ.
ವೈರಸ್ ಸಂಪರ್ಕಿತರ ಪತ್ತೆ ಹಚ್ಚುವ ತಂಡ
ಹುಡಾ ಆಯುಕ್ತ ಎನ್. ಕುಮ್ಮಣ್ಣನವರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಸುಜಾತಾ ಹಸವಿಮಠ (ಸದಸ್ಯ ಕಾರ್ಯದರ್ಶಿ), ಕಿಮ್ಸ್‍ನ ಡಾ.ಲಕ್ಷ್ಮೀಕಾಂತ, ಬಿಸಿಎಂ ಇಲಾಖೆಯ ಡಿಓ ಅಜ್ಜಪ್ಪ ಸೊಗಲದ, ಅಲ್ಪಸಂಖ್ಯಾತರ ಇಲಾಖೆಯ ಡಿಓ ಅಬ್ದುಲ್ ರಷೀದ್ ಮಿರ್ಜನ್ನವರ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಎಂ.ಕೆ. ತಳವಾರ, ಸಹಾಯಕ ಅಂಕಿ ಸಂಖ್ಯೆ ಅಧಿಕಾರಿ ಕಂಟೆಪ್ಪಗೌಡರ ಸೇರಿದಂತೆ ಒಟ್ಟು ವಿವಿಧ ಇಲಾಖೆಗಳ 23 ಜನ ಅಧಿಕಾರಿ ಮತ್ತು ಸಿಬ್ಬಂದಿ ಈ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಹೋಂ ಕ್ವಾರಂಟೈನ್ ಫಾಲೋಅಪ್ ತಂಡ
ಉಪಪೊಲೀಸ್ ಆಯುಕ್ತರು, ಡಿವೈಎಸ್‍ಪಿ ಧಾರವಾಡ (ಸದಸ್ಯ ಕಾರ್ಯದರ್ಶಿ), ಪಾಲಿಕೆಯ ಜಂಟಿ ಆಯುಕ್ತ ಅಜೀಜ್ ದೇಸಾಯಿ ಮತ್ತು ಜಿಲ್ಲೆಯ ಎಲ್ಲ ತಾಲೂಕಾ ಆರೋಗ್ಯ ಅಧಿಕಾರಿಗಳು ತಂಡದಲ್ಲಿದ್ದಾರೆ.
ಹೋಂ ಐಸೋಲೇಶನ್ ತಂಡ
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಸುಜಾತಾ ಹಸವಿಮಠ (ಸದಸ್ಯ ಕಾರ್ಯದರ್ಶಿ), ಡಾ. ಸಂಪತ್ ಕುಮಾರ್ ಮತ್ತು ಜಿಲ್ಲೆಯ ಎಲ್ಲ ತಾಲೂಕಾ ಆರೋಗ್ಯ ಅಧಿಕಾರಿಗಳು ಈ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ವೈರಸ್ ಹೊಂದಿರುವ ವ್ಯಕ್ತಿಗಳ ಶಿಫ್ಟಿಂಗ್ ತಂಡ
ಭೂದಾಖಲೆಗಳ ಉಪನಿರ್ದೇಶಕ ವಿಜಯಕುಮಾರ್, ಡಾ.ಶಶಿ ಪಾಟೀಲ (ಸದಸ್ಯ ಕಾರ್ಯದರ್ಶಿ), ಆರ್ಸಿಹೆಚ್ಒ ಡಾ: ಎಸ್.ಎಂ. ಹೊನಕೇರಿ, ದೀಪಕ್ ಮಡಿವಾಳರ, ಡಾ.ಸುಜಾತಾ ಹಸವಿಮಠ ಮತ್ತು ಜಿಲ್ಲೆಯ ಎಲ್ಲ ತಾಲೂಕಾ ಆರೋಗ್ಯ ಅಧಿಕಾರಿಗಳು ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಯೋಗಾಲಯ (ಟೆಸ್ಟಿಂಗ್) ನಿರ್ವಹಣಾ ತಂಡ
ಡಾ. ಪ್ರಮೋದ್ ಸಾಂಬ್ರಾಣಿ, ಕಿಮ್ಸ್ ಸಂಸ್ಥೆಯ ಡಾ. ಆಶಾ ಪಾಟೀಲ (ಸದಸ್ಯ ಕಾರ್ಯದರ್ಶಿ), ಡಾ. ಮಹೇಶ್ ಮತ್ತು ಡಾ. ಹರ್ಷಿಕಾ ತಂಡದಲ್ಲಿದ್ದಾರೆ.
ಗುರುತಿಸಲಾದ ಕೋವಿಡ್ ಕೇರ್ ಕೇಂದ್ರಗಳು
ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ (100 ಸಾಮರ್ಥ್ಯ), ಗೋಕುಲದಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯ (100 ಸಾಮರ್ಥ್ಯ ), ಗೋಕುಲ ರಸ್ತೆಯಲ್ಲಿರುವ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳ ನಿಲಯ (100 ಸಾಮರ್ಥ್ಯ) ಮತ್ತು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿರುವ ಬಿಸಿಎಂ ವಿದ್ಯಾರ್ಥಿನಿಲಯ (100 ಸಾಮರ್ಥ್ಯ) ಗಳನ್ನು ಗುರುತಿಸಲಾಗಿದೆ.
ರಚಿಸಿರುವ ಎಲ್ಲಾ ತಂಡಗಳು ತಮಗೆ ವಹಿಸಿದ ಕಾರ್ಯಗಳನ್ನು ಸಕಾಲದಲ್ಲಿ, ಸಮರ್ಪಕವಾಗಿ ನಿರ್ವಹಿಸಬೇಕು. ಆ ದಿನದ ಚಟುವಟಿಕೆಗಳು ಹಾಗೂ ವರದಿಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸಬೇಕು. ಮತ್ತು ತಂಡಗಳಿಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕರ್ತವ್ಯಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897ರ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶದಲ್ಲಿ ತಿಳಿಸಿದ್ದಾರೆ.