ಧಾರವಾಡ: ಜನ್ಮ ನೀಡಿದ ತಂದೆಯನ್ನು ಕೊಲೆ ಮಾಡಿ, ಅಪಘಾತ ಎಂಬಂತೆ ಬಿಂಬಿಸಲು ಹೋಗಿ ಮಗ ಸಿಕ್ಕಿಬಿದ್ದಿರುವ ಘಟನೆ, ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ ಕಿರೇಸೂರ ಎಂಬಾತನೇ ಮಗನಿಂದ ಕೊಲೆಯಾದ ದುರ್ದೈವಿ ತಂದೆ, ರಮೇಶ ಕಿರೇಸೂರ ತಂದೆಯನ್ನು ಕೊಲೆ ಮಾಡಿದ ಮಗ. ರಮೇಶನಿಗೆ ಕೊಲೆ ಮಾಡಲು ಸೋದರ ಸಂಬಂಧಿಗಳಾದ ವೆಂಕಪ್ಪ ಮತ್ತು ಸತ್ಯಪ್ಪ ಸಾಥ್ ನೀಡಿದ್ದರು ಎನ್ನಲಾಗಿದೆ.

ಅಕ್ಟೋಬರ್ 27ರಂದು ಜಾವೂರು - ಹಂಚಿನಾಳ ರಸ್ತೆ ಮಧ್ಯೆ ಶವ ಪತ್ತೆಯಾಗಿತ್ತು. ನಮ್ಮ ತಂದೆಗೆ ಅಪಘಾತವಾಗಿದೆ ಎಂದು ಮಗ ರಮೇಶ ದೂರು ನೀಡಿದ್ದರು. ಶವದ ಸ್ವರೂಪ ನೋಡಿ ಅಪಘಾತವಲ್ಲ ಕೊಲೆ ಎಂದು ನಿರ್ಧರಿಸಿ ನವಲಗುಂದ ಪೊಲೀಸರು ತನಿಖೆ ಕೈಗೊಂಡಿದ್ದರಿಂದ ಸತ್ಯ ಬಯಲಾಗಿದೆ. ಕುಟುಂಬಸ್ಥರ ವಿಚಾರಣೆ ಬಳಿಕ ಆರೋಪಿ ಮಗ ಸಿಕ್ಕಿಬಿದ್ದಿದ್ದಾನೆ. ಕುಟುಂಬದ ಸದಸ್ಯರಿಗೆ ಕಿರಿಕಿರಿ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಗ ತಂದೆಯನ್ನೇ ಕೊಲೆ ಮಾಡಿದ್ದಾನೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.