ಹುಬ್ಬಳ್ಳಿ : ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ಮಾಡಿದ ಆರೋಪದ ಮೇಲೆ ಸೋಮು ಅವರಾಧಿ ಎಂಬಾತನನ್ನು ನವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವನಗರದ ಚರ್ಚ್‌ನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸಲಾಗಿದೆ ಎಂದು ವಿಶ್ವನಾಥ ಬೂದೂರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದರು.
ಮತಾಂತರ ಖಂಡಿಸಿ ಹಾಗೂ ಸೋಮು ಅವರಾಧಿ ಬಂಧನಕ್ಕೆ ಒತ್ತಾಯಿಸಿ ಚರ್ಚ್‌ಗೆ ತೆರಳಿದ್ದ ಹಿಂದೂಪರ ಸಂಘಟನೆಗಳ ಮುಖಂಡರು ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರ ನೇತೃತ್ವದಲ್ಲಿ ನವನಗರದ ಬಳಿ ರಸ್ತೆ ತಡೆ ನಡೆಸಿದ್ದರು.
ಅದಾದ ಬಳಿಕ ತಡರಾತ್ರಿಯ ತನಕ ನವನಗರದ ಎಪಿಎಂಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಶಾಸಕ ಅರವಿಂದ ಬೆಲ್ಲದ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಅವರಾಧಿ ಬಂಧನಕ್ಕೆ ಪಟ್ಟು ಹಿಡಿಯಲಾಗಿತ್ತು.
ಪೊಲೀಸ್ ಕಮಿಷನರ್ ಲಾಬೂರಾಮ್ ಕಾನೂನು ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಗಿತ್ತು. ಇದೀಗ ಸೋಮು ಅವರಾಧಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಡಿಸಿಪಿ ರಾಮರಾಜನ್ ವರ್ಗಾವಣೆಗೂ ಹಿಂದೂ ಪರಸಂಘಟನೆ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.