ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಆರಾಧ್ಯ ದೈವ ಶ್ರೀ ಸದ್ಗುರು ಸಿದ್ಧಾರೂಢ ಮಠಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ದಿನ ನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುವ ಸಿದ್ಧಾರೂಢರ ಮಠದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಕೊರೊನಾ ವೈರಸ್ ನಿಯಂತ್ರಣದ ಸದುದ್ದೇಶದಿಂದ ಸ್ವಯಂ ಪ್ರೇರಿತವಾಗಿ ಸೀಲ್ ಡೌನ್ ಮಾಡಲಾಗಿದ್ದು, ಈಗಾಗಲೇ ಆಡಳಿತ ಮಂಡಳಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಯಾರಿಗೂ ಕೂಡ ಮಠದ ಒಳಗೆ ಪ್ರವೇಶ ನೀಡುತ್ತಿಲ್ಲ. ಅಲ್ಲದೇ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೂಡ ಮನವಿ ಮಾಡಿದೆ.
ಮಾರ್ಚ್ ತಿಂಗಳಲ್ಲಿ ಅನ್ನದಾಸೋಹ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿದ್ದು, ಪರಿಸ್ಥಿತಿ ತಿಳಿಗೊಳ್ಳುವವರೆಗೂ ಸ್ವಯಂ ಪ್ರೇರಿತವಾಗಿ ಸೀಲ್ ಡೌನ್ ಮಾಡಲಾಗಿದೆ.