ಬೆಂಗಳೂರು: ಖರ್ಗೆ ಸಿಎಂ ಆಗಬೇಕೆಂಬ ಹೆಚ್ಡಿಕೆ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟರ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಚಿಂಚೋಳಿ ಚುನಾವಣಾ ಪ್ರಚಾರ ಭಾಷಣದಲ್ಲಿ ಖರ್ಗೆ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದ ಸಿಎಂ ಹೆಚ್ಡಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಟ್ವಿಟರ್ ನಲ್ಲೇ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನದ ಅರ್ಹತೆ ಉಳ್ಳವರು ದಂಡಿಯಾಗಿದ್ದಾರೆ:
ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಸಿಎಂ ಸ್ಥಾನದ ಅರ್ಹತೆ ಇರುವವರು ಬಹಳಷ್ಟು ಜನ ಇದ್ದಾರೆ. ಅವರಲ್ಲಿ ಹೆಚ್ಡಿ ರೇವಣ್ಣ ಕೂಡಾ ಒಬ್ಬರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಹೇಳುವ ಮೂಲಕ ಸಿಎಂ ಕುಟುಂಬದಲ್ಲೇ ಒಡಕು ಮೂಡಿಸುವ ಕೆಲಸವನ್ನ ಮಾಡಿರುವುದು ಕುತೂಹಲಕ್ಕೆ ಗ್ರಾಸ ಒದಗಿಸಿದೆ.
ಸಿಎಂ ಕುಮಾರಸ್ವಾಮಿ ಹೆಣೆದ ತಂತ್ರಕ್ಕೆ ಸಿದ್ದರಾಮಯ್ಯ ಪ್ರತಿತಂತ್ರ:
ಮಲ್ಲಿಕಾರ್ಜುನ ಖರ್ಗೆ ಅವರನ್ನು ಓಲೈಸುವುದರ ಹಿಂದಿನ ಸಿಎಂ ಮರ್ಮಕ್ಕೆ ಸಿದ್ದು ಟಕ್ಕರ್ ನೀಡಿದ್ದು, ಕುಮಾರಸ್ವಾಮಿ ಖರ್ಗೆಯವರನ್ನು ಓಲೈಸಿದ್ದಕ್ಕೆ ಸಿದ್ದು ಸಿಎಂಗೆ ಟ್ವೀಟ್ ಗುದ್ದು ಕೊಟ್ಟಿದ್ದಾರೆ. ಇದೀಗ ಹೆಚ್ಡಿಡಿ ಕುಟುಂಬದ ನಡುವೆಯೇ ತಂದಿಟ್ಟರಾ ಸಿದ್ದರಾಮಯ್ಯ ಎಂಬ ಜಿಜ್ಞಾಸೆಯೂ ಮೂಡಿದೆ. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂಬ ಹೇಳಿಕೆಯ ಮರ್ಮವೇನು ಎಂಬ ಲೆಕ್ಕಾಚಾರವೂ ಶುರುವಾಗಿದೆ.
ಇದು ಮೈತ್ರಿ ಅಂತ್ಯಕ್ಕೆ ಮುನ್ಸೂಚನೆಯಾ?
ವಿಶ್ವನಾಥ್ ಹೇಳಿಕೆ ಬಳಿಕ ಕೆನಲಿ ಕೆಂಡವಾಗಿರುವ ಸಿದ್ದರಾಮಯ್ಯ ಟ್ವೀಟ್ಗಳ ಸರಣಿ ತಿರುಗು ಬಾಣಗಳನ್ನ ಹೂಡುತ್ತಲೇ ಇದ್ದು, ಜೆಡಿಎಸ್ ಮೈತ್ರಿಗೆ ಚುನಾವಣೆ ಬಳಿಕ ಇತಿಶ್ರೀ ಹಾಡುವ ಮುನ್ಸೂಚನೆಯಾ ಎಂಬ ಮಾತು ರಾಜಕೀಯ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿದೆ.