ಹುಬ್ಬಳ್ಳಿ: ಉಪಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದರೆ, ಸಿದ್ದರಾಮಯ್ಯ ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಚಿವ ಜಗದೀಶ್ ಶೆಟ್ಟರ್ ಸವಾಲ್ ಎಸೆದಿದ್ದಾರೆ.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಉಪಚುನಾವಣೆಯಲ್ಲಿ ಸೋಲುವ ಭಯ. ಹೀಗಾಗಿ ಸಿದ್ದರಾಮಯ್ಯ ಭ್ರಮೆಯಲ್ಲಿ ಮಾತನಾಡುತ್ತಾರೆ. ಬಿಜೆಪಿ ಪಕ್ಷ ರಾಜ್ಯದ 15 ಕ್ಷೇತ್ರದಲ್ಲಿ ಗೆದ್ದರೆ ಸಿದ್ದರಾಮಯ್ಯ ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಎಂದು ಸಚಿವ ಜಗದೀಶ್ ಶೆಟ್ಟರ್ ಬಹಿರಂಗ ಸವಾಲು ಹಾಕಿದರು.
ಸಿದ್ದರಾಮಯ್ಯ ಈ ಹಿಂದೆ ಏನೂ ಹೇಳಿದ್ದಾರೆ ಅವುಗಳೆಲ್ಲಾ ಉಲ್ಟಾ ಆಗಿದ್ದು, ಕುಮಾರಸ್ವಾಮಿ ಅವರಪ್ಪನ ಆಣೆ ಮುಖ್ಯಮಂತ್ರಿ ಆಗಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಅವು ಯಾವುದೂ ನಿಜವಾಗಿಲ್ಲ. ಮೈತ್ರಿ ಸರ್ಕಾರ ಇದ್ದಾಗ ಸ್ವತಃ ಕುಮಾರಸ್ವಾಮಿ ಅವರೇ ನೊಂದು ಮಾತನಾಡಿದ್ದಾರೆ. ಅವರು ಮತ್ತೆ ಸಮ್ಮಿಶ್ರ ಸರ್ಕಾರ ನಡೆಸುವರು ಎಂಬುದೆಲ್ಲಾ ಕೇವಲ ಭ್ರಮೆ. ಇದು ಅವರ ಮೂರ್ಖತನದ ಪರಮಾವಧಿ. ಈ ಹಿನ್ನಲೆಯಲ್ಲಿ ಸೋಲಿನ ಭಯದಲ್ಲಿ ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯಾಗಿ ಮಾತನಾಡುತ್ತಿದ್ದಾರೆ. ಉಪಚುನಾವಣೆಯಲ್ಲಿಯೂ ಕೂಡಾ ಬಿಜೆಪಿ ಅತಿಹೆಚ್ಚು ಸ್ಥಾನ ಗೆದ್ದು ಸುಭದ್ರವಾದ ಆಡಳಿತ ನಡೆಸಲಿದೆ ಎಂದರು.