ಹುಬ್ಬಳ್ಳಿ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಮತವಾಗಿ ಪರಿವರ್ತನೆ ಆಗಿಲ್ಲ. ಇನ್ನೂ ನಾಳೆ ಕರ್ನಾಟಕಕ್ಕೆ ಬರುತ್ತಿದ್ದು, ಬಂದ ಪುಟ್ಟ ಹೋದ ಪುಟ್ಟ ರೀತಿ ಆಗುತ್ತದೆ. ರಾಜ್ಯದ ನೆಲ ಜಲದ ಬಗ್ಗೆ ಗೊತ್ತಿಲ್ಲದ ರಾಹುಲ್ ಗಾಂಧಿ ಎಷ್ಟು ಬಾರಿ ರಾಜ್ಯಕ್ಕೆ ಬಂದರು ಬಿಜೆಪಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗುಜರಾತ್ ಚುನಾವಣೆಯಲ್ಲಿಯೇ ಅವರು ಭಾರತ ಜೋಡೋ ಯಾತ್ರೆ ಮಾಡುತಿದ್ದರು. ಅವಾಗಲೇ ರುಜುವಾತು ಆಗಿದೆ. ಅವರ ಪರಿಣಾಮ ಏನು ಅಂತ ಗುಜರಾತ್ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನ ಪಡೆದು ಸರ್ಕಾರ ಮಾಡಿದ್ದೇವೆ. ಕರ್ನಾಟಕ ರಾಜ್ಯಕ್ಕೆ ಹಲವಾರು ಸಲ ಅವರು ಬಂದು ಹೋಗಿದ್ದಾರೆ. ಆದರೆ, ಯಾವುದೇ ಪರಿಣಾಮ ಇಲ್ಲ. ಅವರು ಬಂದ ಪುಟ್ಟ ಹೋದ ಪುಟ್ಟ ಆದಂತ ಆಗಿದ್ದು ಕನ್ನಡಿಗರ ಮನಸ್ಸನ್ನ ಗೆಲ್ಲಲು ಅವರ ಬಳಿ ಯಾವುದೇ ಆಯುಧ ಇಲ್ಲ. ಅವರಿಗೆ ಯಾವುದೇ ರೀತಿಯ ಯಶಸ್ಸು ಸಿಗಲ್ಲ ಎಂದು ಭವಿಷ್ಯ ನುಡಿದರು.
ಈ ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಸಹ ರಾಹುಲ್ ಗಾಂಧಿ ಹೋಗುತ್ತಾರೆ, ಅವರು ಎಲ್ಲಲ್ಲಿ ಹೋಗಿದ್ದಾರೆ, ಫಲಿತಾಂಶ ಏನು ಆಗಿದೆ ಅನ್ನೋದು ಗೊತ್ತೇ ಇದೆ. ಕರ್ನಾಟಕದ ಜನತೆಯನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಕನ್ನಡಿಗರ ಭಾವನೆಯನ್ನು ಅರ್ಥ ಮಾಡಿಕೊಂಡಿಲ್ಲ. ಕನ್ನಡ ಭಾಷೆ ಮತ್ತು ಜನರ ಭಾವನೆ ಅವರಿಗೆ ಏನು ಅಂತ ಗೊತ್ತಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಇದನ್ನೂ ಓದಿ : ಉರಿಗೌಡ ನಂಜೇಗೌಡ ಉಲ್ಲೇಖಿತ ಸುವರ್ಣ ಮಂಡ್ಯ ಪುಸ್ತಕ ಮರುಮುದ್ರಿಸಿ, ಜನತೆಗೆ ಹಂಚಿಕೆ : ಶೋಭಾ ಕರಂದ್ಲಾಜೆ
ಉರಿಗೌಡ ಮತ್ತು ನಂಜೇಗೌಡ ನಮ್ಮ ಕರ್ನಾಟಕದ ಹೆಮ್ಮೆ: ಉರಿಗೌಡ, ನಂಜೇಗೌಡ ಕುರಿತು ಕಾಂಗ್ರೆಸ್ ಜೆಡಿಎಸ್ ಆರೋಪಕ್ಕೆ ಕೆಂಡಾಮಂಡಲ ಆದ ಸಚಿವೆ ಶೋಭಾ ಕರಂದ್ಲಾಜೆ, ಉರಿಗೌಡ, ನಂಜೇಗೌಡ ಸ್ವಾಭಿಮಾನಗಳಾಗಿದ್ದರು. ಧರ್ಮಕ್ಕಾಗಿ ಹೋರಾಟ ಮಾಡಿದವರು. ನಮ್ಮ ದೇವಸ್ಥಾನ ಉಳಿಸುವುದಾಕ್ಕಾಗಿ ಹೋರಾಟ ಮಾಡಿದವರು. ಹಿಂದೂಗಳ ಮತ್ತು ಕ್ರೈಸ್ತರ ನರಮೇಧವನ್ನು ಖಂಡಿಸಿ ಹೋರಾಟ ಮಾಡಿದಂತವರು. ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ನಮ್ಮ ಸಮಾಜಕ್ಕೆ ಮತ್ತು ಕರ್ನಾಟಕಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.
ಉರಿಗೌಡ ಮತ್ತು ದೊಡ್ಡ ನಂಜೇಗೌಡ ಟಿಪ್ಪುವಿನ ವಿರುದ್ಧ ಹೋರಾಟಕ್ಕೆ ನಿಂತವರು, 2006ರಲ್ಲಿ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಹೆಚ್ಡಿ ದೇವೇಗೌಡರು ಸುವರ್ಣ ಮಂಡ್ಯ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಈ ಪುಸ್ತಕವನ್ನು ಬರೆದವರು ಡಾ. ದೇ ಜವರೇಗೌಡರು. ಈ ಪುಸ್ತಕದಲ್ಲಿ ಟಿಪ್ಪುವಿನ ಕಾಲದಲ್ಲಿ ನಮ್ಮ ಪರಿಸ್ಥಿತಿ ಹೇಗಿತ್ತು ಹಾಗೂ ಉರಿಗೌಡ ಮತ್ತು ನಂಜೇಗೌಡರ ಹೋರಾಟ ಹೇಗಿತ್ತು ಎಂಬುದನ್ನು ಪುಸ್ತಕದಲ್ಲಿ ದಾಖಲು ಮಾಡಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ : ಶಾಸಕ ಅರವಿಂದ ಬೆಲ್ಲದ್ ಡಿಕೆಶಿ ಭೇಟಿ ಮಾಡಿದ್ದಾರೆ, ಅನ್ನೋದೆಲ್ಲ ಕೇವಲ ಊಹಾಪೋಹ: ಜೋಶಿ