ಹುಬ್ಬಳ್ಳಿ: ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಕುಮಾರ ಹಕಾರೆ ಹೇಳಿದರು.
ನಗರದಲ್ಲಿಂದು ಮಾಧ್ಯಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಸೇನೆ ಪಕ್ಷ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಉತ್ತರ ಕರ್ನಾಟಕದ 7 ವಿಧಾನಸಭೆ ಕ್ಷೇತ್ರ, ದಕ್ಷಿಣ ಕರ್ನಾಟಕದಲ್ಲಿ 4 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಅಲ್ಲದೇ ಈಗಾಗಲೇ ಬೆಂಗಳೂರಿನ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ 3 ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮವಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಮತ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಬಾರಿ ಶಿವಸೇನೆ ಪಕ್ಷ 10 ರಲ್ಲಿ ಕನಿಷ್ಠ 2 ಕ್ಷೇತ್ರದಲ್ಲಿ ಜಯ ಗಳಿಸಲಿದೆ ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಅಭ್ಯರ್ಥಿಯೇ ಸಿಎಂ: ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದಾಗ ಬಿಜೆಪಿ ನಂಬಿಕೆಗೆ ದ್ರೋಹ ಬಗೆದು, ಬೆನ್ನಿಗೆ ಚೂರಿ ಹಾಕಿದೆ ಎಂದು ಆರೋಪಿಸಿದರು. ಈ ಹಿಂದೆಯೇ ಚುನಾವಣೆ ಪೂರ್ವದಲ್ಲಿಯೇ ಶಿವಸೇನೆ, ಬಿಜೆಪಿ ನಾಯಕರೊಂದಿಗೆ ಒಪ್ಪಂದ ಆಗಿ ಶಿವಸೇನಾ ಅಭ್ಯರ್ಥಿ ಸಿಎಂ ಆಗಬೇಕೆಂದು ತಿಳಿಸಲಾಗಿತ್ತು. ಆದ್ರೆ ಚುನಾವಣೆ ನಂತರ ಬಿಜೆಪಿ ಅಧಿಕಾರದ ಆಸೆಯಿಂದ ನಂಬಿಕೆ ದ್ರೋಹ ಮಾಡಿದ್ದು, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆಯ ಅಭ್ಯರ್ಥಿಯೇ ಸಿಎಂ ಆಗಲಿದ್ದಾರೆ ಎಂದರು.
ಧಾರವಾಡ ಜಿಲ್ಲೆಯಲ್ಲೂ ಶಿವಸೇನಾ ಪಕ್ಷವನ್ನು ಬಲಿಷ್ಠಗೊಳಿಸಲಾಗುತ್ತಿದ್ದು, ಧಾರವಾಡ ಜಿಲ್ಲೆಯ ಅಧ್ಯಕ್ಷರಾಗಿ ಅಣ್ಣಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಗಿದೆ. ಕುಂದಗೋಳ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಗಲ ಅವರನ್ನು ಆಯ್ಕೆ ಮಾಡಲಾಗಿದ್ದು, ಮುಂಬರುವ ಪಾಲಿಕೆ ಚುನಾವಣೆ ದೃಷ್ಟಿ ಇಟ್ಟುಕೊಂಡು ಜಿಲ್ಲೆಯಲ್ಲಿ ಶಿವಸೇನೆ ಕೆಲಸ ಮಾಡಲಿದೆ ಎಂದು ತಿಳಿಸಿದರು.