ಧಾರವಾಡ: ಸಿ ಪಿ ಯೋಗೇಶ್ವರ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಏನನ್ನೂ ಮಾತನಾಡದೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜಾರಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 26 ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಜಗದೀಶ್ ಶೆಟ್ಟರ್ ಅವರಿಗೆ ಮಾಧ್ಯಮದವರು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ನಾನು ಧಾರವಾಡಕ್ಕೆ ಯುವಜನೋತ್ಸವದಲ್ಲಿ ಭಾಗವಹಿಸಲು ಬಂದಿದ್ದೇನೆ. ಮೊದಲು ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಬೇಕು. ಆ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.
ನಾನು ಬೆಳ್ಳಗ್ಗೆಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಿದ್ದೇನೆ. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಬೆಳಗ್ಗೆಯಿಂದ ಟಿವಿ ನ್ಯೂಸ್ ಕಾರ್ಯಕ್ರಮಗಳನ್ನು ನೋಡಿಲ್ಲ. ಯಾವ ಸಿಡಿ, ಆಡಿಯೋ ಬಿಡುಗಡೆಯ ಬಗ್ಗೆಯೂ ನನಗೆ ಗೊತ್ತಿಲ್ಲ. ಅದನ್ನು ನೋಡಿದ ಮೇಲೆ ನಾನು ಮಾತನಾಡುತ್ತೇನೆ. ಸಿಡಿ, ಆಡಿಯೋ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ. ನನ್ನ ಕೆಲಸ ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಕುರಿತು ಪ್ರಶ್ನಿಸಿದಾಗ, ಈ ವಿಚಾರವಾಗಿ ಸರ್ಕಾರ ಉತ್ತರ ಕೊಡುತ್ತೆ, ನಾನಲ್ಲ ಎಂದು ಯಾವುದೇ ಪ್ರಶ್ನೆಗೆ ಉತ್ತರಿಸದೇ ಶೆಟ್ಟರ್ ತೆರಳಿದರು. ಇನ್ನು ರಾಷ್ಟ್ರೀಯ ಯುವಜನೋತ್ಸವದ ನಿಮಿತ್ತ ಕೆಲಗೇರಿ ಕೆರೆಯಲ್ಲಿ ಆಯೋಜಿಸಿದ್ದ ಜಲಕ್ರೀಡೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿ ಒಂದು ಸುತ್ತು ಬೋಟಿಂಗ್ ಮಾಡಿದರು.
ಬಿಜೆಪಿ ಪಕ್ಷ ಹಾಗೂ ನಾಯಕರ ಬಗ್ಗೆ, ಆಪರೇಷನ್ ಕಮಲ ಬಗ್ಗೆ ಸಿ ಪಿ ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಆಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೆ ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ ಪಿ ಯೋಗೇಶ್ವರ, ಆ ಆಡಿಯೋ ನನ್ನದಲ್ಲ, ಅದು ಯಾವುದೋ ಫೇಕ್ ಆಡಿಯೋ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ನನಗೆ ವಿರೋಧಿಗಳು ಹೆಚ್ಚು ಅವರೇ ಇದನ್ನು ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಗೆಲ್ಲುತ್ತೇನೆ ಎನ್ನುವ ವಿಶ್ವಾಸ ನನಗಿದೆ, ಹಾಗಿರುವಾಗ ನಾನ್ಯಾಕೆ ಈ ಥರ ಮಾಡಲಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ಗೆ ಬಿಸಿ ತುಪ್ಪವಾದ ಅಲ್ಪಸಂಖ್ಯಾತರು- ಧಾರವಾಡ ಜಿಲ್ಲೆಯಲ್ಲಿ ಓರ್ವ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಲು ಪಟ್ಟು( ಹುಬ್ಬಳ್ಳಿ): ಇದು ಬಿಜೆಪಿ ಕಥೆ ಆದರೆ, ಇನ್ನೊಂದೆಡೆ, ವಿಧಾನ ಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಾಗಲೇ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಲಾಭಿ ಆರಂಭವಾಗಿದೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದಿಟ್ಟಿರುವ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ಗೆ ಒಳ ಹೊಡೆತ ನೀಡುವ ಮುನ್ಸೂಚನೆ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳ ಪೈಕಿ ಒಂದು ಮೀಸಲು ಕ್ಷೇತ್ರ ಹೊರತುಪಡಿಸಿ ಒಂದು ಮುಸ್ಲಿಂ ಸಮುದಾಯ ವ್ಯಕ್ತಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ನಿನ್ನೆ ಸಾಯಂಕಾಲ ಖಾಸಗಿ ಹೋಟೆಲ್ನಲ್ಲಿ ಫಾರೂಖ್ ಅಹ್ಮದ್ ಅಬ್ಬುನವರ್ ನೇತೃತ್ವದಲ್ಲಿ ಸಭೆ ನಡೆಸಿ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದಾರೆ.
ಮುಸ್ಲಿಂ ಸಮುದಾಯದವರು ಐವತ್ತು ವರ್ಷಗಳಿಂದ ಕಾಂಗ್ರೆಸ್ ವೋಟ್ ಹಾಕುತ್ತಾ ಬಂದಿದ್ದೇವೆ. ಈಗ ನಮ್ಮ ಹಕ್ಕನ್ನ ನಾವು ಕೇಳ್ತಾ ಇದ್ದೇವೆ. ಮುಸ್ಲಿಂ ಸಮುದಾಯ ವೋಟ್‌ಗಳು ಹೆಚ್ಚಿರುವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು. ಮುಸ್ಲಿಂ ಸಮುದಾಯದವರಿಗೆ ಯಾರಿಗೆ ಟಿಕೆಟ್ ನೀಡಿದರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಟಿಕೆಟ್ ಕೊಟ್ಟರೆ ಗೆದ್ದು ತೋರಿಸುತ್ತೇವೆ ಎಂದು ಅನ್ವರ ಮುಧೋಳ ಹೇಳಿದರು.
ಕಳೆದ ಮೂವತ್ತು ವರ್ಷಗಳಿಂದ ಸೆಂಟ್ರಲ್ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ನಾವು ಇಷ್ಟು ವರ್ಷಗಳಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದೇವೆ. ಟಿಕೆಟ್ ನೀಡದೆ ಸೋಲುತ್ತೇವೆ ಎಂದು ಟಿಕೆಟ್ ತಪ್ಪಿಸಲಾಗುತ್ತಿದೆ. ಈ ಬಾರಿ ಟಿಕೆಟ್ ನೀಡಿದರೆ ಗೆದ್ದು ತೋರಿಸುತ್ತೇವೆ ಎಂದು ಫಾರೂಖ ಅಹ್ಮದ್ ಹೇಳಿದರು.
ಇದನ್ನೂ ಓದಿ: ಸಂಕ್ರಾಂತಿಯ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ.. ಯೋಗೇಶ್ವರ್ ಆಡಿಯೋ ವೈರಲ್: ಫೇಕ್ ಆಡಿಯೋ ಎಂದ ಯೋಗೇಶ್ವರ್