ಹುಬ್ಬಳ್ಳಿ : ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದು, ನಾನೂ ಕೂಡಾ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಕೆಪಿಸಿಸಿ ಸಂಯೋಜಕ ಶರಣಪ್ಪ ಕೊಟಗಿ ಅವರು ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಮೊದಲು ಹಲವು ಬಾರಿ ಧಾರವಾಡ ಪಶ್ಚಿಮ ವಿಧಾನ ಸಭಾದ ಎಲ್ಲ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ಅತೀ ಹತ್ತಿರದಿಂದ ನೋಡಿದ್ದೇನೆ ಎಂದರು. ಕ್ಷೇತ್ರದ ಮತದಾರರ ತೀವ್ರ ಒತ್ತಾಸೆಯ ಮೇರೆಗೆ ಈ ಹಿಂದೆ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್‌ಗಾಗಿ ಪ್ರಯತ್ನಿಸಿ, ಅಂತಿಮ ಘಳಿಗೆಯಲ್ಲಿ ಪಕ್ಷದ ವರಿಷ್ಠರ ಮನವೊಲಿಕೆಗೆ ಬೆಲೆ ನೀಡಿ ಹಿಂದೆ ಸರಿದಿದ್ದೆ. ಈಗಲೂ ಸಹ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಧರ್ಮಗಳ ಮತದಾರರ ತೀವ್ರ ಒತ್ತಾಯಕ್ಕೆ ಮಣಿದು ಮತ್ತು ಪಕ್ಷಕ್ಕಾಗಿ ಇಲ್ಲಿಯವರೆಗೆ ಶ್ರಮಿಸಿರುವ ದ್ಯೋತಕವಾಗಿ ಈ ಬಾರಿ ಕಾಂಗ್ರೆಸ್ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದೇನೆ ಎಂದು ಹೇಳಿದರು.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯ ವೀರಶೈವ-ಲಿಂಗಾಯತ ಮತದಾರರು ಇರುವುದರಿಂದ ಮತ್ತು ಎಲ್ಲಾ ಸಮಾಜದ ಜನಾಂಗದವರ ಜೊತೆ ಒಳ್ಳೆಯ ಸಂಬಂಧ ಹೊಂದಿರುವುದರಿಂದ, ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಧಾರವಾಡ-ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನನ್ನ ಇಂಗಿತವನ್ನು ಪಕ್ಷದ ವರಿಷ್ಠರಿಗೆ ಮೌಖಿಕವಾಗಿ ತಿಳಿಸಿದ್ದು, ಪಕ್ಷದ ಬಹುತೇಕ ವರಿಷ್ಠರು ಸಮ್ಮತಿ ವ್ಯಕ್ತಪಡಿಸಿರುವುದರಿಂದ ನನ್ನ ವಿಶ್ವಾಸ ಮತ್ತಷ್ಟು ವೃದ್ಧಿಯಾಗಿದೆ ಎಂದು ಹೇಳಿದರು.
ಒಂದು ವೇಳೆ ಟಿಕೆಟ್ ನೀಡಿದರೆ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ. ಟಿಕೆಟ್ ನೀಡದಿದ್ದರೆ ಬಂಡಾಯ ಏಳುವ ಬಗ್ಗೆ ನಾನು ಈಗಲೇ ಏನನ್ನು ಹೇಳಲಾರೆ ಎಂದರು. ಈ ವೇಳೆ ಶಾಂತಣ್ಣ ಕಡಿವಾಳ, ವಿ. ಜಿ. ಪಾಟೀಲ, ಚಳ್ಳಮರದ ಶೇಖ್, ಗೌಸ್ ಪಿಂಜಾರ, ಮೋಹನ ಹೊಸಮನಿ ಇದ್ದರು.
ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: 'ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ವಿರೋಧಿಸಿದವರೇ, ಇಂದು ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಗ್ಯಾರಂಟಿ ನೀಡಲು ಮುಂದಾಗಿರುವುದು ವಿಪರ್ಯಾಸ'' ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ಯೋಜನೆ ವಿರೋಧಿಸಿದವರೇ ಈಗ ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: ಸಿಎಂ ಸಿದ್ದರಾಮಯ್ಯ