ಧಾರವಾಡ: ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿಯಲ್ಲಿ ಮಹದಾಯಿ ವಿಚಾರದ ಕುರಿತು ಸಮಾವೇಶ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕಳಸಾ ಬಂಡೂರಿ ಬಗ್ಗೆ ಮಾತನಾಡುವಂತಹ ಹಾಗೂ ಸಮಾವೇಶ ಮಾಡುವಂತ ನೈತಿಕತೆ ಕಾಂಗ್ರೆಸ್ನವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಜೀವನದುದ್ದಕ್ಕೂ ಕಳಸಾ ಬಂಡೂರಿಗೆ ವಿರೋಧ ಮಾಡಿದ್ದು ಕಾಂಗ್ರೆಸ್. ಈ ಹಿಂದೆ ಕಳಸಾ ಬಂಡೂರಿಗೆ ಒಂದು ಹನಿ ನೀರು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ರು. ಟ್ರಿಬ್ಯುನಲ್ ಸರಿ ಪಡಿಸುವ ಕೆಲಸ ಅವರಿಂದ ಯಾವತ್ತೂ ಆಗಿಲ್ಲ, ರೈತರ ಮೇಲೆ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು. ನಾನು ಅದೇ ಭಾಗದಲ್ಲಿ ಹುಟ್ಟಿದ್ದೇನೆ, ನಾವು ಹೋರಾಟದಿಂದ ನೀರು ಪಡೆಯುವಂತಾಗಿದೆ. ನಮ್ಮ ಭಾಗದ ಅನೇಕ ರೈತರನ್ನು ಚಿತ್ರದುರ್ಗ ಹಾಗೂ ಬಳ್ಳಾರಿ ಜೈಲಿಗೆ ಹಾಕುವಂತಾಯ್ತು. ಹೀಗಾಗಿ, ಕಾಂಗ್ರೆಸ್ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಅವರು ಹುಬ್ಬಳ್ಳಿ ನೆಹರು ಮೈದಾನದಲ್ಲಿ ಸಮಾವೇಶ ಮಾಡಿದ್ದು ಚುನಾವಣೆ ಉದ್ದೇಶದಿಂದ ಅಷ್ಟೇ ಎಂದರು.
ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ದ್ದು ಡಬಲ್ ಸ್ಟ್ಯಾಂಡ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ
ಮಹದಾಯಿ ವಿಚಾರವಾಗಿ ಗೋವಾ ಸಚಿವ ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗೋವಾದ ಬಗ್ಗೆ ನಾನು ಮಾತನಾಡುವುದಿಲ್ಲ. ಕಾನೂನು ಬದ್ಧವಾಗಿ ಟ್ರಿಬ್ಯುನಲ್ನಲ್ಲಿ ಆದೇಶ ಆದ 3.9 ಟಿಎಂಸಿ ನೀರು ನಮ್ಮ ಹಕ್ಕು. ಆ ಹಕ್ಕನ್ನ ಪಡೆಯುವ ಕೆಲಸ ಮಾಡುತ್ತೇವೆ. ನಮಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಬೇಗ ಟೆಂಡರ್ ಕರೆದು ಭೂಮಿ ಪೂಜೆ ಮಾಡುವ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ತಾರೆ. ಡಿಪಿಆರ್ ಅನುಮೋದನೆ ಸಿಕ್ಕಿದೆ, ಇದಕ್ಕಾಗಿ 60 ವರ್ಷ ಕಾದಿದ್ದೇವೆ. ಇನ್ನು 60 ದಿನ ಕಾದರೆ ಒಳ್ಳೆಯ ಸುದ್ದಿ ಕೊಡುತ್ತೇವೆ ಎಂಬ ಭರವಸೆ ನೀಡಿದರು.
ಇದನ್ನೂ ಓದಿ: ದಶಕಗಳ ಹೋರಾಟದ ಸಾಧಕ ಬಾಧಕ ನೋಡದ ಸರ್ಕಾರ: ಮಹದಾಯಿ ಸ್ವರೂಪ ಬದಲಾವಣೆ ಆರೋಪ..
ಒಂದು ತಿಂಗಳೊಳಗೆ ಮಹದಾಯಿ ಕಾಮಗಾರಿ ಪ್ರಾರಂಭ: ಜನವರಿ 2 ರಂದು ಬೆಳಗಾವಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಪಕ್ಷದ ಬೂತ್ ವಿಜಯ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಮುಂದಿನ ಒಂದು ತಿಂಗಳೊಳಗೆ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಿಸಲಾಗುವುದು. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಎಂದ ಕರಿಬೇಡಿ ಎಂದು ಸವಾಲು ಹಾಕಿದ್ದರು. ಜೊತೆಗೆ 2014ಕ್ಕೆ ಮೋದಿ ಸರ್ಕಾರ ಬಂದ ಮೇಲೆ ಮಹದಾಯಿ ನ್ಯಾಯಾಧಿಕರಣ ಸಶಕ್ತಗೊಳಿಸಿತು. ಅದಕ್ಕೆ ಬೇಕಾದ ಮೂಲಸೌಕರ್ಯವನ್ನು ಕಲ್ಪಿಸಲಾಯಿತು. ಕಳಸಾ ಬಂಡೂರಿಯಲ್ಲಿ ಒಟ್ಟಾರೆ ನಮಗೆ 3.9 ಟಿಎಂಸಿ ನೀರು ಕೊಟ್ಟಿದೆ. ನರೇಂದ್ರ ಮೋದಿ ಸರ್ಕಾರ ಡಿಪಿಆರ್ ಅನುಮೋದನೆ ನೀಡಿದೆ. ಇದು ಸುಳ್ಳು ದಾಖಲೆ ಎಂದು ಜನರಿಗೆ ಮೋಸ ಮಾಡಲು ಕಾಂಗ್ರೆಸ್ನವರು ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಒಂದು ತಿಂಗಳಲ್ಲಿ ಮಹದಾಯಿ ಯೋಜನೆ ಕಾಮಗಾರಿ ಆರಂಭ: ಗೋವಿಂದ ಕಾರಜೋಳ