ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೊಸಿರುವ ಶಕ್ತಿ ಯೋಜನೆಯು ಒಂದು ತಿಂಗಳು ಪೂರೈಸಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಒಟ್ಟು 4.02 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ 103.51 ಕೋಟಿ ರೂ. ಆಗಿದೆ ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸರ್ಕಾರದಿಂದ ಆರಂಭಿಸಲಾದ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಜುಲೈ 10ಕ್ಕೆ ಒಂದು ತಿಂಗಳು ಪೂರೈಸಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಯೋಜನೆ ಮುಂದುವರೆದಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಸೇರಿದಂತೆ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಗಳಲ್ಲಿ ಜೂನ್ 11ರಿಂದ ಜುಲೈ 10ರ ವರೆಗೆ ಒಟ್ಟು 4,02,52,638 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ 103,51,65,967 ರೂ. ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಭಾಗವಾರು ಪ್ರಯಾಣ ಮಾಡಿದ ಮಹಿಳೆಯರು, ಪ್ರಯಾಣದ ಟಿಕೆಟ್ ಮೌಲ್ಯದ ಮಾಹಿತಿ:
- ವಿಭಾಗ - ಮಹಿಳೆಯರು(ಲಕ್ಷಗಳಲ್ಲಿ) - ಪ್ರಯಾಣದ ಟಿಕೆಟ್ ಮೌಲ್ಯ (ಕೋಟಿ ರೂ.ಗಳಲ್ಲಿ)
- ಹು-ಧಾ ನಗರ ಸಾರಿಗೆ- 54,23,700 - 6,64,83,273
- ಹುಬ್ಬಳ್ಳಿ ಗ್ರಾಮಾಂತರ- 27,70,090 - 10,01,89,702
- ಧಾರವಾಡ- 3,26,298 - 8,93,61,503
- ಬೆಳಗಾವಿ- 61,15,163 - 12,70,99,283
- ಚಿಕ್ಕೋಡಿ- 52,83,421 - 13,52,65,560
- ಬಾಗಲಕೋಟೆ- 49,70,498 - 16,07,82,999
- ಗದಗ- 42,45,811 - 13,02,22,151
- ಹಾವೇರಿ- 44,97,458 - 12,40,80,658
- ಉತ್ತರ ಕನ್ನಡ- 36,77,199 - 10,16,80,838
ಸಿಬ್ಬಂದಿಗೆ ಎಂಡಿ ಅಭಿನಂದನೆ: ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಲೋಪದೋಷಗಳಿಲ್ಲದೇ ಯೋಜನೆ ಯಶಸ್ವಿಯಾಗಿ ಮುಂದುವರೆದಿದೆ. ಸಂಸ್ಥೆಯಲ್ಲಿ ಹೊಸ ಬಸ್ಗಳ ಸೇರ್ಪಡೆಯಾಗಿರುವುದಿಲ್ಲ. ಚಾಲನಾ ಹಾಗೂ ತಾಂತ್ರಿಕ ಸಿಬ್ಬಂದಿ ನೇಮಕಾತಿಯ ಕೊರತೆ ಇದೆ. ಆದಾಗ್ಯೂ ಸಹ ಲಭ್ಯವಿರುವ ಬಸ್ಗಳು ಹಾಗೂ ಮಾನವ ಸಂಪನ್ಮೂಲಗಳ ಸದ್ಬಳಕೆ ಮಾಡುವ ಮೂಲಕ ಯೋಜನೆಯ ಯಶಸ್ಸಿಗೆ ತಂಡದ ರೂಪದಲ್ಲಿ ಎಲ್ಲಾ ನೌಕರರು ಮತ್ತು ಅಧಿಕಾರಿಗಳ ಕಾರ್ಯಕ್ಷಮತೆಯೇ ಕಾರಣವಾಗಿದೆ. ವಾರಾಂತ್ಯ ದಿನಗಳು, ಹಬ್ಬದ ದಿನಗಳು ಮತ್ತು ಸಾರ್ವಜನಿಕ ರಜೆ ದಿನಗಳಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ಬಸ್ ನಿಲ್ದಾಣಗಳಲ್ಲಿ ಉಪಸ್ಥಿತರಿದ್ದು, ಜನಸಂದಣಿಗೆ ತಕ್ಕಂತೆ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ: ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ; ಸಂಜೆ ಸಿಎಂ ಸಿದ್ದರಾಮಯ್ಯ ಚಾಲನೆ