ಧಾರವಾಡ: ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆಯೇ ಸೀಲ್ಡೌನ್ ಪ್ರದೇಶದಿಂದ ಬಂದ ಮಹಿಳೆಯೊಬ್ಬರು ಜನರ ದಿಕ್ಕು ತಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ನಂತರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.
ಮೊರಬದಿಂದ ಬಂದ ಈ ಮಹಿಳೆ ಧಾರವಾಡದಲ್ಲಿ ಸುತ್ತಾಡಿದ್ದಾರೆ. ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಅಲ್ಲದೇ ಗಂಡನ ಮನೆ ಇರುವ ಬೇಲೂರು ಗ್ರಾಮದಲ್ಲೂ ತನ್ನನ್ನು ಸೇರಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ವಿಷಯ ತಿಳಿದ ತಹಶೀಲ್ದಾರ್ ಡಾ.ಸಂತೋಷ ಕುಮಾರ ಬಿರಾದಾರ ಅವರು, ಪ್ರಕರಣ ಪರಿಶೀಲಿಸುವಂತೆ ಗ್ರಾಮೀಣ ಸಿಪಿಐಗೆ ತಿಳಿಸಿದ್ದರು. ಪೊಲೀಸರು ವಿಚಾರಣೆ ಮಾಡಿದ ನಂತರ ಮಹಿಳೆ ತಪ್ಪು ಒಪ್ಪಿಕೊಂಡಿದ್ದಾಳೆ. ನಂತರ ಆಕೆಯನ್ನು ಮೊರಬ ಗ್ರಾಮಕ್ಕೆ ಕಳುಹಿಸಲಾಗಿದೆ.
ನಗರದಲ್ಲಿ ಗುರುವಾರ ನಡೆದ ಪಿಯುಸಿ ಪರೀಕ್ಷೆಗೆ ಈ ಮಹಿಳೆ ತಮ್ಮ ಸಂಬಂಧಿಕ ವಿದ್ಯಾರ್ಥಿಯೊಂದಿಗೆ ಆಗಮಿಸಿದ್ದರು ಎನ್ನಲಾಗಿದೆ. ಇದೀಗ ನಗರ ಹಲವೆಡೆ ಮಹಿಳೆ ಸುತ್ತಾಡಿರುವುದು ಕೆಲವರಲ್ಲಿ ಭೀತಿ ಮೂಡಿಸಿದೆ.