ಹುಬ್ಬಳ್ಳಿ: ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಲಾಕ್ಡೌನ್ ಸಡಿಲಿಕೆ ಮಾಡಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ಕಲ್ಪಿಸಲಾಗಿದೆ. ಅದರಂತೆ ಮಾಂಸಕ್ಕೂ ಅವಕಾಶ ನೀಡಿದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗ್ರಾಹಕರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡುವ ಮೂಲಕ ಮಾಂಸ ಮಾರಾಟ ಮಾಡಲಾಗುತ್ತಿದೆ.
ಭಾನುವಾರದ ಹಿನ್ನೆಲೆ ಮಾಂಸ ಪ್ರಿಯರು ಹೆಚ್ಚಾಗಿ ಖರೀದಿ ಮಾಡುವುದು ಸಹಜ. ಪರಿಣಾಮ ರಾಜ್ಯ ಸರ್ಕಾರ ಮಾಂಸ ಮಾರಾಟಕ್ಕೆ ಅವಕಾಶ ನೀಡಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿತ್ತು. ಅದರಂತೆ ನಗರದ ಕೇಶ್ವಾಪುರದಲ್ಲಿರುವ ಎಮ್.ಜಿ.ಬಿ. ಚಿಕನ್ ಸೆಂಟರ್ ನ ಮಾಲೀಕರು ಗ್ರಾಹಕರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೇಜರ್ ಹಾಗೂ ಸ್ಕ್ರೀನಿಂಗ್ ಟೆಸ್ಟ್ ಗೆ ಒಳಪಡಿಸಿ ಮಾಂಸ ನೀಡುತ್ತಿದ್ದಾರೆ.
ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿರುವ ಗ್ರಾಹಕರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಪರಿಣಾಮ ಚಿಕನ್ ಅಂಗಡಿ ಮಾಲೀಕರ ಮುಂಜಾಗ್ರತಾ ಕ್ರಮಕ್ಕೆ ಮೆಚ್ಚಿರುವ ಗ್ರಾಹಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.