ಹುಬ್ಬಳ್ಳಿ: ಪರಿಶಿಷ್ಟ ಜಾತಿ ಒಳಮೀಸಲು ವರ್ಗೀಕರಣದ ಸಾಮಾಜಿಕ ಬೇಡಿಕೆಯ ಈಡೇರಿಕೆಗಾಗಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳು, ಚಳುವಳಿಗಾರರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳು ಕಳೆದ ಮೂವತ್ತು ವರ್ಷಗಳಿಂದ ನಡೆಸಿದ ನಿರಂತರ ಹೋರಾಟಕ್ಕೆ ಕೊನೆಗೂ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದನ್ನು ಸಮಸ್ತ ಮಾದಿಗ ಸಮುದಾಯ ಹೃತ್ಪೂರ್ವವಾಗಿ ಸ್ವಾಗತಿಸುವುದು ಎಂದು ಹು-ಧಾ ಪೂರ್ವ ವಿಧಾನಸಭಾ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.
ಮಾಧ್ಯಮದ ಮೂಲಕ ಮಾತನಾಡಿದ ಅವರು, ಪ್ರಸ್ತುತ ನ್ಯಾ.ಎ.ಜೆ. ಸದಾಶಿವ ಆಯೋಗದ ಒಳಮೀಸಲು ವರದಿ ಮಂಡನೆಕ್ಕಿಂತ ಮುಂಚೆಯೇ, ಕೆಲ ಸಮುದಾಯಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಆಳುವ ಸರ್ಕಾರಗಳು ಪ್ರಸ್ತುತ ವರದಿಯನ್ನು ಸದನದಲ್ಲಿ ಮಂಡನೆ ಮಾಡಿರಲಿಲ್ಲ. ಸಮಾಜದಲ್ಲಿ ಎಲ್ಲ ರಂಗದಲ್ಲಿ ಶೋಷಣೆಗೆ ಒಳಗಾದ ಮಾದಿಗ ಜನಾಂಗ, ಡೋಹರ, ಮಚಿಗಾರ, ಸಮಗಾರ ಸೇರಿದಂತೆ ಮುಂತಾದ ಉಪಜಾತಿಗಳ ಜನರಿಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ನ್ಯಾಯ, ನೀತಿ, ಧರ್ಮಕ್ಕೆ ನೀಡಿದ ತೀರ್ಪಾಗಿದೆ ಎಂದರು.
2005 ರಲ್ಲಿ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರನ್ನು ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು ಒಳಮೀಸಲಾತಿ ಪ್ರಸ್ತಾಪವನ್ನು ತಳ್ಳಿಹಾಕಿತ್ತು. ಅಲ್ಲದೇ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂದಿತ್ತು. ಇದೀಗ ಅರುಣಕುಮಾರ ಮಿಶ್ರಾ ಅವರನ್ನು ಒಳಗೊಂಡ ಐವರ ಪೀಠವು ಒಳಮೀಸಲಾತಿ ನೀಡಲು ಸಂವಿಧಾನದ 341,342 ವಿಧಿಯನ್ನು ತಿದ್ದುಪಡಿ ಮಾಡುವ ಅಗತ್ಯವಿಲ್ಲ. ಆಯಾ ರಾಜ್ಯಗಳೇ ತೀರ್ಮಾನಿಸಬಹುದು ಎಂದು ತಿಳಿಸಿದ್ದು, ಇದನ್ನು ಶೋಷಿತ ಸಮುದಾಯ ಸ್ವಾಗತ ಮಾಡುವುದು ಎಂದರು.