ಹುಬ್ಬಳ್ಳಿ : ಉತ್ತರ ಕರ್ನಾಟಕದ ನಿರಂತರ ಹೋರಾಟದ ಫಲವಾಗಿ ಮಹದಾಯಿ ನ್ಯಾಯಾಧಿಕರಣದ ತೀರ್ಪು ಬಂದಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ರಾಜ್ಯ ಸರ್ಕಾರ 1600 ಕೋಟಿ ರೂಪಾಯಿಗಳನ್ನ ಈ ಯೋಜನೆಯ ಕಾಮಗಾರಿಗೆ ತೆಗೆದಿಟ್ಟಿದೆ. ಆದರೂ ಕಾಮಗಾರಿ ಶುರುವಾಗಿಲ್ಲ. ಆದರೆ, ಈಗ ಜನರಲ್ಲಿ ಆಶಾಭಾವನೆ ಮೊಳಕೆ ಒಡೆದಿದೆ.
ಸುಮಾರು ನಾಲ್ಕು ದಶಕಗಳಿಂದ ಕಳಸಾ-ಬಂಡೂರಿ ಹೋರಾಟ ನಡೆಯುತ್ತಿದೆ. ನಿರಂತರ ಹೋರಾಟದ ಫಲವಾಗಿ ನ್ಯಾಯಾಧಿಕರಣದ ತೀರ್ಪು ಹೊರ ಬಂದು ರಾಜ್ಯಗಳಿಗೆ ನೀರು ಹಂಚಿಕೆಯಾಗಿತ್ತು. ಬಳಿಕ ಗೆಜೆಟ್ ನೋಟಿಪಿಕೇಶನ್ ಆಗಿಲ್ಲ ಅಂತಾ ಸರ್ಕಾರ ಕುಂಟು ನೆಪ ಹೇಳುತ್ತಾ ಹೋದಾಗ, ಕೊನೆಗೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ವರ್ಷಗಳೇ ಕಳೆಯುತ್ತಿದೆ. ಹೀಗಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.
ರಾಜ್ಯ ಸರ್ಕಾರ ಕಳೆದೆರಡು ಬಜೆಟ್ನಲ್ಲಿ ಮಹದಾಯಿಗಾಗಿ ಹಣ ತೆಗೆದಿಟ್ಟು ಕಾಮಗಾರಿ ಶುರು ಮಾಡದೆ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದರಿಂದ ಬೇಸತ್ತಿರುವ ಜನರಿಗೆ ಈಗ ಹೋರಾಟದಲ್ಲಿ ಭಾಗಿಯಾಗಿದ್ದ ನಾಯಕ ಶಂಕರಪಾಟೀಲ ಮುನೇನಕೊಪ್ಪ ಅವರು ಸಚಿವರಾಗಿರುವುದರಿಂದ ಸಾಕಷ್ಟು ಭರವಸೆ ಹುಟ್ಟು ಹಾಕಿದೆ.
ಹೋರಾಟಕ್ಕೆ ಫಲ ಸಿಕ್ಕಿದೆ ಎಂದುಕೊಂಡಿದ್ದ ಜನರಿಗೆ ಸರ್ಕಾರದ ನಡೆ ಬೇಸರವನ್ನುಂಟು ಮಾಡಿತ್ತು. ಆದರೆ, ಈಗ ಹೋರಾಟದ ನೇತೃತ್ವವಹಿಸಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಹದಾಯಿ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ.
ಓದಿ: ಸರ್ಕಾರದ ಕಾರ್ಯಕ್ರಮಗಳಲ್ಲಿ ಹಾರ, ಹಣ್ಣಿನ ಬುಟ್ಟಿ, ಶಾಲು, ಕಾಣಿಕೆ ನೀಡಬಾರದು: ಸರ್ಕಾರದ ಸುತ್ತೋಲೆ