ಹುಬ್ಬಳ್ಳಿ : ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ ಸೇರಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಇತರೆ ಬಸ್ ನಿಲ್ದಾಣಗಳಲ್ಲಿ ರವಿವಾರ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನ ಸಿಂಪಡಿಸಲಾಯಿತು.
ಕೋವಿಡ್ ಎರಡನೇ ಅಲೆ ಭೀತಿ ಜಗತ್ತನ್ನೇ ತಲ್ಲಣಗೊಳಿಸಿದೆ. ಇದು ಮೊದಲಿಗಿಂತಲೂ ಅತೀ ವೇಗವಾಗಿ ವ್ಯಾಪಿಸುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನಗಳ ಪ್ರಕಾರ ಸಾರಿಗೆ ಸಂಸ್ಥೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಬಸ್‌ಗಳಲ್ಲಿರುವ ಆಸನಗಳ ಸಂಖ್ಯೆಯಷ್ಟು ಜನರು ಮಾತ್ರ ಪ್ರಯಾಣಿಸಲು ಅನುಮತಿಸಲಾಗುತ್ತದೆ. ಸಾಮರ್ಥ್ಯಕಿಂತ ಹೆಚ್ಚಿಗೆ ಪ್ರಯಾಣಿಕರು ಪ್ರಯಾಣಿಸಲು ಅವಕಾಶ ಇರಲ್ಲ. ಕೋವಿಡ್ ನಿಯಮಾವಳಿಗಳನ್ನು ಸಮರ್ಪಕ ಅನುಷ್ಟಾನಗೊಳಿಸಲು ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕೆಂದು ವಾಕರಸಾನಿದ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ಮನವಿ ಮಾಡಿದ್ದಾರೆ.

ಇದನ್ನು ಓದಿ:ಬೇಸಿಗೆ ಬಂದ್ರೂ ಮುಗಿಯದ ಸ್ವಿಮ್ಮಿಂಗ್‌ಫೂಲ್ ಕಾಮಗಾರಿ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಬ್ಬಳ್ಳಿ ಜನ ಆಕ್ರೋಶ
ಕರ್ತವ್ಯದ ಸಮಯದಲ್ಲಿ ಬಸ್ ಮತ್ತು ಕಚೇರಿಗಳಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಕ್ರಮವಹಿಸಲಾಗಿದೆ. ಚಾಲಕ-ನಿರ್ವಾಹರಿಗೆ ವೈಯಕ್ತಿಕ ಉಪಯೋಗಕ್ಕಾಗಿ ಪ್ರತ್ಯೇಕ ಸ್ಯಾನಿಟೈಜರ್ ನೀಡಲಾಗುತ್ತದೆ. ಪ್ರತಿದಿನ ಸಂಚಾರ ಮುಗಿಸಿ ಘಟಕಕ್ಕೆ ಹಿಂದಿರುಗಿ ಬರುವ ಬಸ್‌ಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತದೆ. ಬಸ್ಸುಗಳನ್ನು, ಡಿಪೋಗಳನ್ನು ಮತ್ತು ಬಸ್ ನಿಲ್ದಾಣಗಳನ್ನು ನಿಯಮಿತವಾಗಿ ಸ್ಯಾನಿಟೇಷನ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.