ಧಾರವಾಡ: ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಕಡುಬಡವರು ಹಾಗೂ ವಿಕಲ ಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕೊರೊನಾ ವೈರಸ್ನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಜನರು ಕೈಯಲ್ಲಿ ಸರಿಯಾದ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವೇಳೆ ಸಾಲು ಸಾಲು ಹಬ್ಬಗಳು ಬಂದಿವೆ. ಹೀಗಾಗಿ ಹಬ್ಬದ ಆಚರಣೆಗೆ ಸಹಾಯವಾಗಲೆಂದು ಸಮರ್ಥನಂ ಅಂಗವಿಕಲರ ಸಂಸ್ಥೆ ಆಹಾರ ಕಿಟ್ ವಿತರಣೆ ಮಾಡಿತು.
ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಅರ್ಹ ಫಲಾನುಭವಿಗಳು ಆಗಮಿಸಿ ಆಹಾರ ಕಿಟ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಉದಯಕುಮಾರ ವೈ ಬಾಗುನವರ, ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣಾ ಲಮಾಣಿ, ಪ್ರಾಣೇಶ ಹೇಮಾದ್ರಿ, ಮಂಜುನಾಥ ಕಂಬಿ ಸೇರಿದಂತೆ ಸಂಸ್ಥೆಯ ಇತರೆ ಸಿಬ್ಬಂದಿ ವರ್ಗ ಇದ್ದರು.