ಹುಬ್ಬಳ್ಳಿ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ 150 ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ವೆಯಲ್ಲಿ ಮುಂದಿದ್ದು, 130 ಕ್ಷೇತ್ರಗಳಲ್ಲೂ ಮುಂದಿದೆ. ರಾಜ್ಯದ 224 ಕ್ಷೇತ್ರಗಳಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ ನೈತಿಕತೆ ಕಳೆದುಕೊಂಡಿದ್ದು, ಜನರು ಸರ್ಕಾರದ ಕೆಲಸದಿಂದ ಬೇಸರಗೊಂಡಿದ್ದಾರೆ. ಬಿಜೆಪಿ ಪಾಪದ ಕೊಡ ತುಂಬಿದ್ದು, ಯಾವಾಗ ಚುನಾವಣೆ ಬರುತ್ತದೆ ಎಂದು ಜನರು ಕಾಯತ್ತಿದ್ದಾರೆ. ಈ ಬಾರಿ ಜನರು ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ದೇಶದಲ್ಲಿಯೇ ರಾಜ್ಯ ಭ್ರಷ್ಟಾಚಾರದ ರಾಜಧಾನಿ ಆಗಿದೆ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಇದೀಗ ಜನ ಸಂಕಲ್ಪ ಯಾತ್ರೆಯ ನಾಟಕ ಮಾಡುತ್ತಿದೆ. ಅದರ ಬದಲು ಸರ್ಕಾರ ಕ್ಷಮೆ ಯಾತ್ರೆ ಮಾಡಬೇಕು.
ಸಾವಿರಾರು ಜನ ಬೆಂಗಳೂರು ಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಜನ ಬಿಜೆಪಿ ಸರ್ಕಾರದ ಬಗ್ಗೆ ನೊಂದಿದ್ದಾರೆ. ಬಿಜೆಪಿಯವರಿಗೆ ಸೋಲುತ್ತೇವೆ ಅನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಸೇರಿದ ಚಿಲುಮೆ ಕಂಪನಿಯನ್ನು ಪೊಲಿಂಗ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ಅವರೆಲ್ಲ ಬಿಜೆಪಿ ಕಾರ್ಯಕರ್ತರಾಗಿದ್ದು, ಮುಖ್ಯಮಂತ್ರಿಗಳು, ಅಶ್ವತ್ಥ ನಾರಾಯಣ ಹಾಗೂ ತುಷಾರ್ ಗಿರಿನಾಥ್ ವಿರುದ್ಧ ದೂರು ದಾಖಲಾಗಬೇಕು.
ಇದು ಕೇವಲ ಬಿಬಿಎಂಪಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಈ ಕಂಪನಿಯಿಂದ ಕೆಲಸ ಶುರುವಾಗಿದೆ. ಚುನಾವಣೆಯಲ್ಲಿ ಬಿಜೆಪಿ ವೋಟ್ ಕದಿಯೋ ಕೆಲಸ ಮಾಡುತ್ತಿದೆ. ಇದರ ವಿರುದ್ದ ನಾಳೆ ಬೆಂಗಳೂರಿನಲ್ಲಿ ನಮ್ಮ ನಾಯಕರು ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಆರೋಪ: ಚುನಾವಣೆ ಆಯೋಗಗಕ್ಕೆ ವರದಿ ಸಲ್ಲಿಕೆ