ಹುಬ್ಬಳ್ಳಿ: ನಗರದ ವಿವಿಧೆಡೆಯಲ್ಲಿ ಫುಟ್ಪಾತ್ನ್ನು ಅತಿಕ್ರಮಿಸಿ ಅಂಗಡಿ-ಮುಂಗಟ್ಟು ನಿರ್ಮಿಸುವ ಮೂಲಕ ಸಂಚಾರಕ್ಕೆ ಅಡ್ಡಿ ಮಾಡಿದವರನ್ನು ಮಹಾನಗರ ಪಾಲಿಕೆ ತೆರವುಗೊಳಿಸಿತು.
ಜಿಲ್ಲಾಧಿಕಾರಿ ಆದೇಶದಂತೆ ಈ ಹಿಂದೆ ಫುಟ್ಪಾತ್ ಒತ್ತುವರಿ ಮಾಡಿದವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅದರಂತೆ ಸೋಮವಾರ ಇಲ್ಲಿನ ನಿಲಿಜನ್ ರಸ್ತೆ, ದೇಶಪಾಂಡೆ ನಗರ, ಕೋರ್ಟ್ ಸರ್ಕಲ್ ಕಡೆಗಳಲ್ಲಿ ಫುಟ್ಪಾತ್ ಮೇಲೆ ನಿರ್ಮಿಸಲಾಗಿದ್ದ ನೂರಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಯಿತು. ಇದೇ ವೇಳೆ ಅಂಗಡಿ ಮಾಲೀಕರಿಗೆ ಫುಟ್ಪಾತ್ಗಳ ಮೇಲೆ ಮತ್ತೊಮ್ಮೆ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಇನ್ನು ರಸ್ತೆ ಅತಿಕ್ರಮಣದಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ತಕ್ಷಣ ತೆರವುಗೊಳಿಸುವಂತೆ ಇತ್ತೀಚೆಗೆ ಸಾರ್ವಜನಿಕರು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಜನಪ್ರತಿನಿಧಿಗಳು ತೆರವಿಗೆ ಆಗ್ರಹಿಸಿದ್ದರು. ನಂತರ ಜಿಲ್ಲಾಧಿಕಾರಿ ಸಭೆ ನಡೆಸಿ ತೆರವಿಗೆ ಸೂಚಿಸಿದ್ದರು. ಅದರಂತೆ ಕಾರ್ಯ ಪ್ರವೃತ್ತವಾಗಿರುವ ಪಾಲಿಕೆ ಅತಿಕ್ರಮಣವಾಗಿದ್ದ ಸ್ಥಳಗಳಲ್ಲಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.