ಹುಬ್ಬಳ್ಳಿ: ಕೇಂದ್ರ ಸರ್ಕಾರ ರೈತರು, ಕೂಲಿ ಕಾರ್ಮಿಕರು, ಬಡವರ ಪರವಿಲ್ಲ. ಇದೊಂದು ಕಾರ್ಪೋರೇಟ್ ಕಂಪನಿಗಳ ಸರ್ಕಾರ. ಬಿಜೆಪಿ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳು ರೈತರಿಗೆ ಮಾರಕವಾಗಿವೆ ಎಂದು ರಿಪಬ್ಲಿಕ್ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತೋಟಗೇರ್ ಆರೋಪಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಮೋದಿ ದೇಶದಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ರೈತರ ಪಾಲಿಗೆ ಮರಣ ಶಾಸನವಾಗಿರುವ ಕೃಷಿ ಉತ್ಪನ್ನ ಮಾರಾಟ, ವಾಣಿಜ್ಯ ಉತ್ತೇಜನ ಮತ್ತು ಸೌಲಭ್ಯ ಮಸೂದೆಗೆ ಒತ್ತಾಯದ ಅಂಗೀಕಾರ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ.
ಭಾರತದ ರೈತರ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ. ರೈತರಿಗೆ ಇದರಿಂದ ಲಾಭವಿಲ್ಲ ಎಂದು ಕಿಡಿಕಾರಿದರು. ರೈತರಿಗೆ ನೆರವಾಗುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ತಿದ್ದುಪಡಿಯನ್ನು ತಂದಿದ್ದರೆ ಇದನ್ನು ಮೊದಲು ವಿಸ್ತೃತ ಚರ್ಚೆಗೊಳಪಡಿಸಬೇಕಿತ್ತು. ಅದನ್ನು ಬಿಟ್ಟು ತರಾತುರಿಯಲ್ಲಿ ಕಾಯ್ದೆ ತಿದ್ದುಪಡಿ ತರಲು ಹೊರಟಿರುವುದು ಖಂಡನೀಯ. ಹೀಗಾಗಿ ರಾಷ್ಟ್ರಪತಿಗಳು ರೈತ ವಿರೋಧಿ ಮಸೂದೆಗೆ ಅಂಕಿತ ಹಾಕದೇ ಆಡಳಿತ ಪಕ್ಷಕ್ಕೆ ತಿಳುವಳಿಕೆ ನೀಡಿ ಮರಳಿ ಕಳಿಸಬೇಕೆಂದು ಒತ್ತಾಯಿಸಿದ್ದಾರೆ.