ಧಾರವಾಡ: ಈ ಹಿಂದೆ ಯಡಿಯೂರಪ್ಪನವರಿಂದಲೇ ಕುಮಾರಸ್ವಾಮಿ 20 ತಿಂಗಳ ಕಾಲ ಸಿಎಂ ಆಗಿ ಅಧಿಕಾರ ಅನುಭವಿಸಿದ್ದರು. ಈಗ ನೀರಿನಲ್ಲಿರುವ ಮೀನನ್ನು ಹೊರಗೆ ಬಿಟ್ಟಂತೆ ಎಚ್ಡಿಕೆ ಪರಿಸ್ಥಿತಿಯಾಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟೀಕಿಸಿದ್ದಾರೆ
ಧಾರವಾಡ ಜಿಲ್ಲೆಯ ಅಮರಗೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಬರಲು ಶಾಸಕರು ತಯಾರಿದ್ದಾರೆಂಬ ಎಚ್.ಡಿ.ಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಎಚ್ಡಿಕೆ ಗೆ ಎಲ್ಲೋ ಬುದ್ಧಿ ಭ್ರಮಣೆ ಆಗಿದೆ ಅನಿಸುತ್ತದೆ. ಹಾಗಾಗಿ ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯ ಶಾಸಕರೆಲ್ಲಾ ಶಿಸ್ತಿನ ಸಿಪಾಯಿಗಳು. ನಾವೆಲ್ಲಾ ಸಿಂಹದ ಮರಿಗಳಿದ್ದಂತೆ, ಜೆಡಿಎಸ್ ಮುಳುಗಿ ಹೋಗ್ತಾ ಇದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ಮಾತನಾಡುವುದಿಲ್ಲ, ಆದರೆ, ಬಿಜೆಪಿಗೆ ಯಾರೆಲ್ಲ ಬಂದಿದ್ದಾರೆಯೋ ಪಕ್ಷ ಅವರನ್ನು ಗೌರವಿಸುತ್ತದೆ ಎಂದರು.
ಡಿಸಿಎಂ ಹುದ್ದೆ ವಿಚಾರಕ್ಕೆ ಮಾತನಾಡಿದ ಅವರು, ರೇಣುಕಾಚಾರ್ಯ ಅಂದ್ರೆ ರೇಣುಕಾಚಾರ್ಯ ಆಗಿಯೇ ಇರುವೆ. ಆನೆ ನಡೆದಿದ್ದೇ ದಾರಿ. ನಮ್ಮ ಕ್ಷೇತ್ರದ ಜನ ಹೀಗೆ ಇರು ಅಂದಿದ್ದಾರೆ, ನಾನು ಹಾಗೆಯೇ ಇರುವೆ. ನಾನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ. ಮಾತನಾಡುವುದರಿಂದ ಪಕ್ಷದ ಮುಖಂಡರಿಗೆ ಮುಜುಗರ ಆಗಬಾರದು. ಹಾಗಂತ ನಾನು ವೀಕ್ ಆಗಿದ್ದೇನೆ ಅಂತಲ್ಲ ಎಂದರು.