ಹುಬ್ಬಳ್ಳಿ: ಗೆಳೆಯರ ಜೊತೆ ಆಟವಾಡುತ್ತಿದ್ದ ಬಾಲಕನೋರ್ವ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ಹಳೇಹುಬ್ಬಳ್ಳಿಯ ರಾಮನಗರದಲ್ಲಿ ನಡೆದಿದೆ.
ಶಶಾಂಕ ಮಂಜುನಾಥ ಸೋನಾವಣೆ (09) ಮೃತ ಬಾಲಕ. ಶಶಾಂಕ್ ಗೆಳೆಯರ ಜೊತೆ ಪಾಲಿಕೆಯ ಕಟ್ಟಡದ ಮೇಲೆ ಆಟವಾಡುತ್ತಿದ್ದ. ಈ ಸಮಯದಲ್ಲಿ ಕಾಲು ಜಾರಿ ಸರ್ವಿಸ್ ವೈಯರ್ ಮೇಲೆ ಬಿದ್ದ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆಸ್ಕಾಂ ವಿರುದ್ಧ ದೂರು
ಪಾಲಿಕೆ ಕಟ್ಟಡದ ಮೇಲೆ ಕೈಗೆ ತಾಗುವಂತೆ ವಿದ್ಯುತ್ ತಂತಿ ಹಾದು ಹೋಗಿದೆ. ಪಕ್ಕದಲ್ಲೇ ಮನೆಗಳಿವೆ. ಹಾಗಾಗಿ ಇದನ್ನು ಸ್ಥಳಾಂತರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಹೆಸ್ಕಾಂ ಗಮನಹರಿಸಿಲ್ಲ. ಈ ಅನಾಹುತಕ್ಕೆ ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಪಾಲಕರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.