ಧಾರವಾಡ: ಮುಂಗಾರು ನಿರೀಕ್ಷೆಯಲ್ಲಿ ರೈತರೆಲ್ಲರೂ ಬಿತ್ತನೆ ಕಾರ್ಯ ಮಾಡಿದ್ದರು. ಆದ್ರೆ, ಮತ್ತೆ ಮಳೆರಾಯ ಕೈಕೊಟ್ಟ ಪರಿಣಾಮ ಬೆಳೆಗಳೆಲ್ಲವೂ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಹೌದು, ದೇಶದೆಲ್ಲೆಡೆ ಕೊರೊನಾ ಹಾವಳಿಯ ನಡುವೆಯೂ ಮುಂಗಾರು ಮಳೆ ನಂಬಿ ರೈತ ಸಮುದಾಯ ಬೀಜಗಳನ್ನು ಬಿತ್ತಿದ್ದರು. ಮುಂಗಾರು ನಿರೀಕ್ಷೆಯಂತೆ ಮಳೆ ಆಗದ ಕಾರಣ, ಬಿತ್ತಿದ್ದ ಬೀಜಗಳು ಮೊಳಕೆ ಒಡೆದಿದ್ದು, ಇದೀಗ ಬೆಳೆಗಳು ಒಣಗುವಂತಾಗಿದೆ.
ಜಿಲ್ಲೆಯಲ್ಲಿ ಕಳೆದ ವಾರ ನಿರಂತರವಾಗಿ ಮಳೆಯಾಗಿದ್ದು, ರೈತರಲ್ಲಿ ಆಶಾಭಾವನೆ ಮೂಡಿಸಿತ್ತು. ಆದ್ರೆ ನಾಲ್ಕೈದು ದಿನಗಳಿಂದ ಮಳೆ ಆಗದೆ ಇರುವುದರಿಂದ ಬೆಳೆಗಳು ಮೊಳಕೆಯಲ್ಲೇ ಸಾಯುತ್ತಿವೆ.
ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಶೇಂಗಾ, ಹೆಸರು, ಅಲಸಂದಿ, ಹತ್ತಿ, ಸುಹೆಬಾನ ಹಾಗೂ ಆಲೂಗಡ್ಡೆ ಹೀಗೆ ಅನೇಕ ಬೆಳೆಗಳನ್ನು ನಂಬಿ ಜೀವನ ನಡೆಸುತ್ತಾರೆ. ಅದರಂತೆ ಮುಂಗಾರು ಬೆಳೆಗೆ ಉತ್ತಮ ಮಳೆಯಾದರೆ ಮಾತ್ರ ಬಿತ್ತಿದ ಬೆಳೆಗಳು ಉತ್ತಮ ಲಾಭ ತಂದು ಕೊಡುತ್ತದೆ. ಆದರೀಗ, ಮುಂಗಾರು ಬಿತ್ತನೆಗೆ ಸಾವಿರಾರು ರೂಪಾಯಿ ಸಾಲ ಮಾಡಿ ಗೊಬ್ಬರ, ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ ರೈತರಿಗೆ ಸದ್ಯ ಮಳೆಯ ಕೊರತೆ ಮತ್ತಷ್ಟು ಸಂಕಟ ಹೆಚ್ಚಿಸಿದೆ.