ಹುಬ್ಬಳ್ಳಿ: ಶಾಸಕ ತಿಪ್ಪಾರಡ್ಡಿ ಅಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯಕ್ಕೆ ಬಿಜೆಪಿ ಸಂಸ್ಕೃತಿ ಏನು ಎಂಬುದು ಗೊತ್ತಾಗಿದೆ. 40 ಪರ್ಸೆಂಟ್ ಸರ್ಕಾರವೋ 50 ಪರ್ಸೆಂಟ್ ಸರ್ಕಾರವೋ ಅವರವರಲ್ಲಿಯೇ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು. ನಗರದ ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿದರು.
ನಾವು ಚರ್ಚೆ ಮಾಡಿ ಪ್ರಯೋಜನವಿಲ್ಲ. ಬಿಜೆಪಿಯ ನಾಯಕರು, ಶಾಸಕರಲ್ಲಿಯೇ ಕೆಸರೆರಚಾಟ ಆರಂಭವಾಗಿದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಜನರು ಬಿಜೆಪಿಯನ್ನು ಅಧಿಕಾರದಿಂದ ಹೊರ ಕಳುಹಿಸುತ್ತಾರೆ. ಇನ್ನು ಕಾಂಗ್ರೆಸ್ನವರದ್ದು ರಾಜ್ಯದ ನಾಯಕರದ್ದೇ ಇಲ್ಲಿ ಏನೂ ನಡೆಯುತ್ತಿಲ್ಲ. ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಬಂದು ಸಮಾವೇಶ ನಡೆಸಿದರೂ ಏನೂ ಪ್ರಯೋಜನವಾಗದು ಎಂದಿದ್ದಾರೆ.
ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ತನಿಖೆಗೆ ಪ್ರತಿಕ್ರಿಯಿಸಿ, ಯಾವ ರೀತಿ ತನಿಖೆ ಮಾಡುತ್ತಾರೆ, ಏನೆಲ್ಲಾ ತನಿಖೆ ಮಾಡುತ್ತಾರೆ ಎಂಬುದನ್ನು ನೋಡೋಣ. ತನಿಖೆಯಿಂದ ಏನೆಲ್ಲಾ ಸತ್ಯಾಂಶ ಹೊರತರುತ್ತಾರೆ ನೋಡೋಣ ಎಂದರು.
ಇಂದಿನಿಂದ ಮೂರನೇ ಸುತ್ತಿನ ಪಂಚರತ್ನ ಯಾತ್ರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ ಆರಂಭ ಆಗುತ್ತದೆ. ಫೆಬ್ರವರಿ 2 ರವರೆಗೆ ವಿಜಯಪುರ, ರಾಯಚೂರು ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಯಾತ್ರೆ ನಡೆಸಲಾಗುತ್ತಿದೆ. ಮುಂದಿನ 15 ದಿನಗಳ ಕಾಲ ಪಂಚರತ್ನ ಯಾತ್ರೆ ಇಲ್ಲಿ ನಡೆದು, ನಂತರ ನಾಲ್ಕನೇ ಹಂತರ ಪಂಚರತ್ನ ಯಾತ್ರೆ ಕಿತ್ತೂರು ಕರ್ನಾಟಕದಲ್ಲಿ ಸಾಗುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಈಗಾಗಲೇ ಯಾತ್ರೆ ಕೈಗೊಂಡಿದ್ದೇವೆ. ಅಲ್ಲಿನ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜನತಾ ದಳಕ್ಕೆ ಬೆಂಬಲ ಸೂಚಿಸಬೇಕು ಎಂಬ ಜನರ ಕೂಗು ನಮಗೆ ಯಾಥ್ರೆ ಸಮಯದಲ್ಲಿ ಕೇಳಿ ಬಂದಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ, ಚಿತ್ರದುರ್ಗ ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ನಿನ್ನೆ ಸಂಜೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ ತಿಪ್ಪಾರೆಡ್ಡಿ ಅವರು ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಕಮಿಷನ್ ಕೇಳಿರುವ ಬಗ್ಗೆ ಆಡಿಯೋ ಕೂಡ ಬಿಡುಗಡೆ ಮಾಡಿದ್ದರು.
ವಿರೋಧ ಪಕ್ಷಗಳು ಬಿಜೆಪಿ ಪಕ್ಷದ ಮೇಲೆ 40 ಶೇಕಡಾ ಸರ್ಕಾರ ಎಂದು ಹೇಳುತ್ತಿರುವ ಆರೋಪಕ್ಕೆ ಪುಷ್ಠಿ ನೀಡುವಂತೆ ಮಂಜುನಾಥ್ ಅವರು ಕೂಡ ರಾಜ್ಯದಲ್ಲಿ ಕಮಿಷನ್ ಇರುವುದ ಸತ್ಯ. ಸಚಿವರು, ಶಾಸಕರು ಸೇರಿ 17ರಿಂದ 18 ಮಂದಿ ಕಮಿಷನ್ ಪಡೆದಿರುವ ದಾಖಲೆ ನಮ್ಮಲ್ಲಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ ಶಾಸಕ ತಿಪ್ಪಾರೆಡ್ಡಿ ಅವರಿಂದ. ಅವರು ಕಮಿಷನ್ ಪಡೆದಿರುವ ಕುರಿತು ಆಡಿಯೋ ಮಾತ್ರವಲ್ಲ ವಿಡಿಯೋ ಕೂಡ ಇದೆ ಎಂದು ಆರೋಪಿಸಿದ್ದರು.