ಹುಬ್ಬಳ್ಳಿ: ಪ್ರತಿಯೊಂದು ವ್ಯವಹಾರ ಹಾಗೂ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಅವಶ್ಯಕ. ಆದರೆ, ಕೊರೊನಾ ಹಾವಳಿ ಮಧ್ಯೆಯೂ ಆಧಾರ್ ಕಾರ್ಡ್ ಪಡೆಯಲು ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕರು ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ, ಹೆಸರು ತಿದ್ದುಪಡಿ, ಮೊಬೈಲ್ ನಂಬರ್ ಸೇರ್ಪಡೆ, ವಿಳಾಸ ಸೇರ್ಪಡೆ ಅಥವಾ ಹೊಸ ಆಧಾರ್ ಕಾರ್ಡ್ ಮಾಡಿಸಲು ತೊಂದರೆ ಪರದಾಡುವಂತಾಗಿದೆ. ಆಧಾರ್ ಕಾರ್ಡ್ ತಿದ್ದುಪಡಿಗೆ ಯುಐಡಿಎಐ ವತಿಯಿಂದ ಕೆಲವು ನಿಯಮಗಳನ್ನು ವಿಧಿಸಿದ್ದು, ಅದರಲ್ಲಿ ಗ್ರೇಡ್ 1, ಗ್ರೇಡ್ 2 ಗೆಜೆಟೆಡ್ ಅಧಿಕಾರಿಗಳಿಂದ ಪ್ರಮಾಣಪತ್ರ ಸಲ್ಲಿಸುವಂತೆ ತಿಳಿಸಿದೆ. ಹೀಗಾಗಿ ಜನಸಾಮಾನ್ಯರು ಕಚೇರಿಯಿಂದ ಕಚೇರಿಗಳಿಗೆ ಅಲೆಯಬೇಕಾಗಿದೆ. ಆದರೆ ಅದು ಕೂಡ ಪ್ರಯೋಜನವಾಗುತ್ತಿಲ್ಲವೆಂದು ಸಾರ್ವಜನಿಕರು ಆರೋಪಸುತ್ತಿದ್ದಾರೆ.
ಕೊರೊನಾ ವೈರಸ್ ಹೆಚ್ಚಾಗಿರುವುದರಿಂದ ಯಾವುದೇ ಕಚೇರಿಯಲ್ಲಿ ಜನ ಸಾಮಾನ್ಯರಿಗೆ ಪ್ರವೇಶ ಅಷ್ಟಕಷ್ಟೇ ಆಗಿದೆ. ಇದರಿಂದ ಆಧಾರ್ ಕಾರ್ಡ್ ಮಾಡಿಸುವವರು ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ. ಅಧಿಕಾರಿಗಳು ಸರ್ಕಾರದ ಸ್ಪಷ್ಟ ಆದೇಶ ಇಲ್ಲದಿರುವುದರಿಂದ ದೃಢೀಕರಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಜನಸಾಮಾನ್ಯರು ಕೂಡ ಸದ್ಯಕ್ಕಿರುವ ಕೋವಿಡ್ ಬಿಕ್ಕಟ್ಟನ್ನು ಗಮನದಲ್ಲಿರಿಸಿಕೊಂಡು ಸರತಿ ಸಾಲಿನಲ್ಲಿ ಬಂದು ನಿಂತು ದೃಢೀಕರಣ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಅಧಿಕಾರಿಗಳಿಗೆ, ಸಂಬಂಧಪಟ್ಟ ಸಿಬ್ಬಂದಿಯ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ಅಪರ ತಹಶೀಲ್ದಾರರು ಮನವಿ ಮಾಡಿದ್ದಾರೆ.