ಹುಬ್ಬಳ್ಳಿ: ವಿದ್ಯುತ್ ಕಂಪನಿಗಳು ವಿದ್ಯುತ್ ದರ ಏರಿಕೆಗೆ ನೀಡಿರುವ ಪ್ರಸ್ತಾವವನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿರಸ್ಕರಿಸಬೇಕೆಂದು ವಿದ್ಯುತ್ ಗ್ರಾಹಕರ ಹಿತರಕ್ಷಣಾ ವೇದಿಕೆ ಮತ್ತು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಕೋವಿಡ್‌ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ದರವು ಸಹ ಏರಿಕೆಯಾಗಿದೆ. ಇಂತಹ ಸ್ಥಿತಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿದರೆ, ಜನರಿಗೆ ಮತ್ತಷ್ಟು ಹೊರೆಯಾಗಲಿದೆ.
ಹೆಸ್ಕಾಂ ಈ ಬಾರಿಯು ವಿವಿಧ ಉದ್ದೇಶದಿಂದ ವಿದ್ಯುತ್ ಬಳಕೆಯ ದರ ಏರಿಸಲು ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಆಯೋಗವು ಜಿಲ್ಲೆಯಲ್ಲಿ ಫೆ. 22ರಂದು ಸಾರ್ವಜನಿಕ ಸಭೆ ನಡೆಸಲಿದೆ. ಇಂತಹ ಸಭೆಗಳು ಹೆಸರಿಗಷ್ಟೇ ನಡೆಯಲಿದ್ದು, ಗ್ರಾಹಕರು ನೀಡುವ ಸಲಹೆ-ಸೂಚನೆಗಳನ್ನು ಪರಿಗಣಿಸುವುದಿಲ್ಲ. ವಿದ್ಯುತ್ ಕಂಪನಿಗಳ ಪ್ರಸ್ತಾವದಂತೆ, ಏಕಪಕ್ಷೀಯವಾಗಿ ದರ ಏರಿಕೆಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ದೀಪಾವಳಿ, ಸಂಕ್ರಾಂತಿಗೆ ಗೋವು ಪೂಜಿಸ್ತೀರಿ ಮತ್ ಕಟ್ ಯಾಕ್ ಮಾಡ್ತೀರಿ: ಸಚಿವ ಪ್ರಭು ಚವ್ಹಾಣ್ ಪ್ರಶ್ನೆ
2002 06ರಲ್ಲಿ ಮಂಗಳೂರಿನ ತಣ್ಣೀರು ಬಾವಿ ವಿದ್ಯುತ್ ಕಂಪನಿಯಿಂದ 545.87 ಕೋಟಿ ರೂಪಾಯಿ ಮೊತ್ತದ ವಿದ್ಯುತ್ ಖರೀದಿಸಲಾಗಿತ್ತು. ಆ ಮೊತ್ತವನ್ನು ಸಕಾಲದಲ್ಲಿ ಪಾವತಿಸದಿದ್ದರಿಂದ, ಅದರ ಬಡ್ಡಿ ಶೇ. 12 ರಷ್ಟು ಅಂದರೆ 1,111.20 ಕೋಟಿ ರೂಪಾಯಿ ಸೇರಿದಂತೆ ಒಟ್ಟು 1,657.07 ಕೋಟಿ ರೂಪಾಯಿಯನ್ನು ಕಂಪನಿಗೆ ಪಾವತಿಸಬೇಕಿದೆ. ಈ ಮೊತ್ತವನ್ನು ವರ್ಷಕ್ಕೆ 314.41 ಕೋಟಿ ರೂಪಾಯಿಯಂತೆ ಐದು ವರ್ಷಗಳಲ್ಲಿ ಒಟ್ಟು ಮೊತ್ತವನ್ನು ಗ್ರಾಹಕರಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಆದರೆ ಗ್ರಾಹಕರ ಬದಲು, ಸರ್ಕಾರವೇ ಈ ಮೊತ್ತವನ್ನು ಭರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.