ಹುಬ್ಬಳ್ಳಿ: ಕೊರೊನಾ ಸೋಂಕು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್, ಐಸಿಯು ಮತ್ತು ವೆಂಟಿಲೇಟರ್ಗಳನ್ನು ಗುರುತಿಸಿ ಸಮರ್ಪಕ ಚಿಕಿತ್ಸೆ ಒದಗಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಲಾಕ್ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ನಿಯಮ ಉಲ್ಲಂಘನೆಗೆ ಅವಕಾಶ ನೀಡಬಾರದು. ಸಾರ್ವಜನಿಕರು ಅನಗತ್ಯವಾಗಿ ಸಂಚರಿಸಬಾರದು. ಲಾಕ್ಡೌನ್ ಸಂದರ್ಭದಲ್ಲಿ ವಿನಾಯಿತಿ ನೀಡಿದ ಕೈಗಾರಿಕೆ, ವಾಣಿಜ್ಯ, ಕಟ್ಟಡ ನಿರ್ಮಾಣ ಮೊದಲಾದ ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಬಾರದು. ನಿಯಮ ಉಲ್ಲಂಘಿಸಿದ ಪ್ರಕರಣಗಳು ಕಂಡು ಬಂದರೆ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಸಚಿವರು ತಿಳಿಸಿದರು.
ಹೊರ ಜಿಲ್ಲೆಗಳಿಂದ ಅನಧಿಕೃತವಾಗಿ ಯಾರಿಗೂ ಪ್ರವೇಶ ನೀಡಬಾರದು. ಹೆಚ್ಚುತ್ತಿರುವ ಸೋಂಕಿನ ಪ್ರಮಾಣಕ್ಕೆ ಅನುಗುಣವಾಗಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಐಸಿಯು ಮತ್ತು ವೆಂಟಿಲೇಟರ್ಗಳನ್ನು ಗುರುತಿಸಬೇಕು. ಖಾಸಗಿ ಆಸ್ಪತ್ರೆಗಳು ಸಹಕಾರ ನೀಡದಿದ್ದರೆ ನಿರ್ದಾಕ್ಷಿಣ್ಯವಾಗಿ ಸಾಂಕ್ರಾಮಿಕ ರೋಗಗಳು ತಡೆ ಕಾಯ್ದೆ1897 ಅಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಚಿವ ಜಗದೀಶ್ ಶೆಟ್ಟರ್ರಿಂದ ಲಾಕ್ಡೌನ್ ವೀಕ್ಷಣೆ:
ಬಳಿಕ ಸಚಿವ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯ ಗೋಕುಲ ರಸ್ತೆ, ಅಕ್ಷಯ ಪಾರ್ಕ್, ಸಿದ್ಧಾರೂಢ ಮಠ ನಗರ, ಹೆಗ್ಗೇರಿ, ಇಂಡಿ ಪಂಪ್, ಹಳೇ ಹುಬ್ಬಳ್ಳಿ, ನ್ಯೂ ಇಂಗ್ಲೀಷ್ ಸ್ಕೂಲ್, ಚಿತ್ರಕಾರ ಓಣೆ, ದುರ್ಗದ ಬೈಲ್ನಲ್ಲಿ ಸಂಚರಿಸಿ ಲಾಕ್ಡೌನ್ ಅನುಷ್ಠಾನದ ಕುರಿತು ಪರಿವೀಕ್ಷಣೆ ನಡೆಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.