ಧಾರವಾಡ: ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಖಾಯಂ ನೇಮಕಾತಿಗೊಂಡು ಕಾರ್ಯ ನಿರ್ವಹಿಸುತ್ತಿರುವ ನಿಮಾನ್ಸ್ನ ಶುಶ್ರೂಷಕ ಸಿಬ್ಬಂದಿಯು ರೋಗಿಗಳ ಸೇವೆಯಲ್ಲಿ ವ್ಯತ್ಯಯವಾಗದಂತೆ ಆಸ್ಪತ್ರೆ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಘಿಕವಾಗಿ ಪ್ರತಿಭಟನೆ ನಡೆಸಿದರು. ಧಾರವಾಡ ನಿಮಾನ್ಸ್ ಆವರಣದಲ್ಲಿ ಶುಶ್ರೂಷಾಧಿಕಾರಿ ಪರಮೇಶ್ವರ ಸಾಸ್ವಿಹಳ್ಳಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರಿಗೆ ದೊರೆಯುವ ಸೌಲಭ್ಯಗಳಾದ ಕೆಜಿಐಡಿಎನ್ಪಿಸಿ ಮತ್ತು ಡಿಸಿಆರ್ಜಿ ಸೌಲಭ್ಯಗಳಿಂದ ಈ ಇಲಾಖೆ ಅಡಿಯಲ್ಲಿ ಬರುವ ಶುಶ್ರೂಕರು ವಂಚಿತರಾಗಿದ್ದಾರೆ. ಆರೋಗ್ಯ ಇಲಾಖೆಯ ನೌಕರರಂತೆ ನಾವು ಕೆಲಸ ನಿರ್ವಹಿಸುತ್ತಿದ್ದು ಸೌಲಭ್ಯದಲ್ಲಿ ಮಾತ್ರ ತಾರತಮ್ಯ ಮಾಡುತ್ತಿರುವುದು ವಿಷಾದದ ಸಂಗತಿ ಎಂದು ತಮಗಾಗುತ್ತಿರುವ ಅನ್ಯಾಯವನ್ನು ಹೊರಹಾಕಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ನೇಮಕಾತಿಗೊಂಡು 11 ವರ್ಷಗಳಾಗಿವೆ, ಇದುವರೆಗೂ ಸರ್ಕಾರದಿಂದ ಯಾವುದೇ ಸೌಲಭ್ಯಗಳು ತಮಗೆ ಸಿಕ್ಕಿಲ್ಲ. ಮುಂದೆ ನಮ್ಮ ನಿವೃತ್ತಿಯ ನಂತರ ಕೊಡುವ ಪಿಂಚಣಿ (NPS) ಇತರೆ ಭತ್ಯೆಗಳೂ ಇಲ್ಲ, ನಾವು ಸರ್ಕಾರದ ಅಡಿಯಲ್ಲಿ ನಿಯಮಾವಳಿಗಳ ಪ್ರಕಾರ ನೇಮಕಾತಿಗೊಂಡರೂ ನಾವು ಸರ್ಕಾರಿ ನೌಕರಲ್ಲ ಎಂಬಂತೆ ಸರ್ಕಾರ ನಮ್ಮನ್ನ ನಡೆಸಿಕೊಳ್ಳುತ್ತಿದೆ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಡುವೆ ಇರುವ ಸೌಲಭ್ಯ ತಾರತಮ್ಯವನ್ನು ಬಗೆಹರಿಸುವವರೆಗೂ ರೋಗಿಗಳ ಸೇವೆಯಲ್ಲಿ ವತ್ಯಯವಾಗದಂತೆ ಪ್ರತಿ ದಿನ ಕಪ್ಪು ಪಟ್ಟಿ ಧರಿಸಿ ರೋಗಿಗಳಗೆ ಶುಶ್ರೂಷೆ ನೀಡಲಾಗುತ್ತದೆ ಎಂದರು.