ಹುಬ್ಬಳ್ಳಿ: ಬಜೆಟ್ನಲ್ಲಿ ಸರ್ಕಾರ ಶಿಕ್ಷಕರ ಯಾವುದೇ ಬೇಡಿಕೆಗಳನ್ನ ಈಡೇರಿಸದ ಹಿನ್ನೆಲೆಯಲ್ಲಿ ಮಾ. 23ರಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದಿಂದ ಬೆಂಗಳೂರು ಚಲೋ ಕರೆ ನೀಡಲಾಗಿದೆ ಎಂದು ಸಂಘದ ಪ್ರಧಾನ ಸಂಚಾಲಕ ಬಸವರಾಜ ಧಾರವಾಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಬೆಂಗಳೂರು ನಿವಾಸದ ಎದುರು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ, ಉಪವಾಸ ಸತ್ಯಾಗ್ರಹ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 10 ಸಾವಿರ ಶಿಕ್ಷಕರು ಕುಟುಂಬ ಸಮೇತ ಭಾಗವಹಿಸಲಿದ್ದಾರೆ ಎಂದರು.
1995ರ ನಂತರ ಆರಂಭವಾದ ಕನ್ನಡ ಮಾಧ್ಯಮಿಕ ಶಾಲೆಗಳಿಗೆ ಅನುದಾನ ವಿಸ್ತರಿಸಬೇಕು. ಖಾಸಗಿ ಶಾಲೆಗಳ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿ ಇತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದು ಎಂದು ಬಸವರಾಜ್ ತಿಳಿಸಿದರು.