ಧಾರವಾಡ: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದಕ್ಕೆ ರಾಜ್ಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ಮಾಡುತ್ತಿದೆ. ಸೆ. 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಂದ್‌ಗೆ ಧಾರವಾಡ ಜಿಲ್ಲೆಯಿಂದ ಬೆಂಬಲ ವ್ಯಕ್ತವಾಗಿದೆ.
ಉತ್ತರ ಕರ್ನಾಟಕ ಭಾಗದ ಮಹದಾಯಿ ಹೋರಾಟಗಾರರು ಹಾಗೂ ಇತರೆ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಂದು ಧಾರವಾಡ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 3ರ ವರೆಗೆ ಧಾರವಾಡ ಬಂದ್‌ಗೆ ನಿರ್ಧಾರ ಮಾಡಿದ್ದಾರೆ.
ಸಂಘಟನೆಗಳ ಸಭೆಯಲ್ಲಿ ಬಂದ್ ಬೆಂಬಲಿಸಲು ನಿರ್ಧಾರ ವ್ಯಕ್ತಪಡಿಸಿದ್ದು, 40ಕ್ಕೂ ಹೆಚ್ಚು ಸಂಘಟನೆಗಳು ಕೈ ಜೋಡಿಸುವ ಸಾಧ್ಯತೆಯಿದೆ. ಮಹದಾಯಿ ಬಂದ್ ಮಾದರಿಯಲ್ಲಿಯೇ ಕಾವೇರಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಕಾವೇರಿ, ಮಹದಾಯಿ ಎನ್ನದೇ ರಾಜ್ಯದ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆ ಸಹ ಅಂದು ಸ್ತಬ್ಧವಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಬಿಜೆಪಿ- ಜೆಡಿಎಸ್ನಿಂದ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರಿನ ಹರಿವು ವಿಚಾರವಾಗಿ ರಾಜ್ಯ ಸರಕಾರದ ಸಂಪೂರ್ಣ ವೈಫಲ್ಯವನ್ನು ಖಂಡಿಸಿ ಇಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಳಿಕ ಇದು ಮೊದಲ ಜಂಟಿ ಹೋರಾಟವಾಗಿದೆ. ಧರಣಿಯಲ್ಲಿ ಪಕ್ಷದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಪ್ರಮುಖರು ಭಾಗವಹಿಸಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಖಂಡಿಸಿ ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ನಿನ್ನೆ ನಡೆದ ಬೆಂಗಳೂರು ಬಂದ್‌ಗೆ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲ ನೀಡಿತ್ತು. ಇದೀಗ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ಸರ್ಕಾರ ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಹಾಗೂ ಜಾತ್ಯಾತೀತ ಜನತಾ ದಳ ಎಂಬ ಪೋಸ್ಟರ್ ಹಿಡಿದು ಧೋಸ್ತಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕಾವೇರಿ ಕಿಚ್ಚು: ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ