ಹುಬ್ಬಳ್ಳಿ: ರೈಲ್ವೆ ಸಚಿವಾಲಯ ಪ್ರಸ್ತಾಪಿಸಿರುವ ರೈಲ್ವೆಯ ಖಾಸಗೀಕರಣವನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಗದಗ ರಸ್ತೆಯಲ್ಲಿರುವ ರೈಲು ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಸಾವಿರಾರು ರೈಲ್ವೆ ಕಾರ್ಮಿಕರು ರೈಲ್ವೆ ಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಎಸ್ಡಬ್ಲೂಆರ್ಎಮ್ಯುನ ವಲಯ ಪ್ರಧಾನ ಕಾರ್ಯದರ್ಶಿ ಡಾ.ಎ.ಎಂ ಡಿಕ್ರೂಜ್, ರೈಲ್ವೆ ಇಲಾಖೆಯ ಉತ್ಪಾದನಾ ಘಟಕಗಳನ್ನು ಯಾವುದೇ ಕಾರಣಕ್ಕೂ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ಗೆ ಕೊಡಲು ಬಿಡುವುದಿಲ್ಲ ಎಂದರು.
ರೈಲ್ವೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಹೊಸ ಫೆನ್ಷನ್ ಪದ್ಧತಿಯನ್ನು ರದ್ದುಪಡಿಸಿ ಹಳೆಯ ಪದ್ಧತಿಯನ್ನೇ ಮುಂದುವರೆಸಬೇಕು. ನೇರ ನೇಮಕಾತಿಯ ಶೇ.10ರಷ್ಟು ಹುದ್ದೆಗಳನ್ನು ಟ್ರ್ಯಾಕ್ ಮೆಂಟೆನರ್ಗಳಿಗೆ, ಗ್ರೇಡ್ ಪೇ ಅಡಿಯಲ್ಲಿ ಬರುವ ಕಾರ್ಮಿಕರಿಗೆ ಮೀಸಲಿಡಬೇಕು. ನಿಗದಿತ ಅವಧಿಗಳಲ್ಲಿ ಎಲ್ಡಿಸಿಇ ಮತ್ತು ಜಿಡಿಸಿಇ ಪರೀಕ್ಷೆಗಳನ್ನು ನಡೆಸಿ,ಎಲ್ಲ ಸಿಬ್ಬಂದಿಗೆ ಕಾಲ ಕಾಲಕ್ಕೆ ಬಡ್ತಿಯನ್ನು ಮಾಡಬೇಕು ಎಂದು ಮನವಿ ಮಾಡಿದರು.