ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯು ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿಸಲು ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಪಾಲಿಕೆಯ ಗುತ್ತಿಗೆದಾರರ ಸಂಘದಿಂದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪಾಲಿಕೆಯಲ್ಲಿ ಸುಮಾರು ವರ್ಷಗಳಿಂದ ಬಾಕಿ ಇರುವ ಹಣವನ್ನು ಪಾವತಿಸಲು ವಿಳಂಬಗೊಳಿಸಿದ್ದಾರೆ ಹಾಗೂ ಗುತ್ತಿಗೆದಾರರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹು-ಧಾ ಮಹಾನಗರದ ಕಾಮಗಾರಿ ಹಿನ್ನೆಲೆ ಪ್ರತಿ ತಿಂಗಳಿಗೆ ಮೂರು ಕೋಟಿ ಹಣವನ್ನು ನೀಡಬೇಕು. ಆದರೆ ಪಾಲಿಕೆ ಆಯುಕ್ತರು ಗುತ್ತಿಗೆದಾರರಿಗೆ ನೀಡಬೇಕಾದ ಐವತ್ತು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೇ ಹಾರಿಕೆಯ ಉತ್ತರ ನೀಡುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಕಿ ಇರುವ ಹಣವನ್ನು ನಮಗೆ ನೀಡುವಂತೆ ಒತ್ತಾಯಿಸಿದರೂ ಮಹಾನಗರ ಪಾಲಿಕೆ ಆಯುಕ್ತರು ಯಾವುದೇ ಕಾಳಜಿ ತೋರುತ್ತಿಲ್ಲ ಎಂದು ಘೋಷಣೆ ಕೂಗಿ ವಾಗ್ದಾಳಿ ನಡೆಸಿದ ಅವರು, ಹಣ ಬಿಡುಗಡೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.