ಧಾರವಾಡ: ಇಲ್ಲಿನ ಜ್ಯುಬಿಲಿ ವೃತ್ತದ ಬೀದಿ ಬದಿಯಲ್ಲಿ ಮಳೆಯಲ್ಲಿ ನೆನೆಯುತ್ತ ಸಂಕಷ್ಟ ಅನುಭವಿಸುತ್ತಿದ್ದ 70 ವರ್ಷದ ವೃದ್ಧರೊಬ್ಬರನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಸೂಚನೆ ಮೇರೆಗೆ ರಾಯಾಪುರ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲಿಸಲಾಯಿತು.
ಕನ್ನಡ ಭಾಷೆ ಅರಿಯದ ಇವರು ಸುಂದರಂ ಎಂದು ತಮ್ಮ ಹೆಸರನ್ನು ಮಾತ್ರ ಹೇಳುತ್ತಾರೆ. ತಮಿಳು ಭಾಷೆಯಲ್ಲಿ ಮಾತನಾಡುತ್ತಾರೆ. ಈ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ, ಸಮವಸ್ತ್ರ, ಹಾಸಿಗೆ, ಹೊದಿಕೆ, ಊಟ ಪೂರೈಸಲಾಗಿದೆ ಎಂದು ಕೇಂದ್ರದ ಮೇಲ್ವಿಚಾರಕಿ ಪ್ರಿಯದರ್ಶಿನಿ ಹಿರೇಮಠ ತಿಳಿಸಿದ್ದಾರೆ.
ಮಳೆಹಾನಿ ಸ್ಥಳ ಪರಿಶೀಲನೆ:
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆಹಾನಿ ಪ್ರದೇಶಗಳನ್ನ ಪರಿಶೀಲಿಸಿದರು. ಧಾರವಾಡ ನಗರದ ಕೆಹೆಚ್‌ಬಿ ಕಾಲೋನಿ, ಗೌಡ್ರಓಣಿ, ನೆಹರೂ ನಗರ, ಸಿದ್ಧಾರೂಢನಗರ,ಶ್ರೀನಗರ, ಭಾವಿಕಟ್ಟಿ ಪ್ಲಾಟ್, ಅಕ್ಷಯ ಕಾಲೋನಿ, ಮಾಳಮಡ್ಡಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆಹಾನಿ, ಚರಂಡಿ ವ್ಯವಸ್ಥೆ ಪರಿಶೀಲಿಸಿ, ಚರಂಡಿ ಹಾಗೂ ನಾಲೆಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ತೆಗೆದುಕೊಳ್ಳಲು ಮತ್ತು ತೊಂದರೆಗೊಳಗಾದ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪಾಲಿಕೆಯ ಆಯುಕ್ತರಿಗೆ ತಿಳಿಸಿದರು.