ಧಾರವಾಡ: ಆಸ್ತಿ ವಿವಾದ ಸಂಬಂಧ ಎರಡು ಕಡೆಯವರ ನಡುವೆ ಗಲಾಟೆ ನಡೆದು, ಆತಂಕದಿಂದ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಬಡಾವಣೆಯಲ್ಲಿ ಬುಧವಾರ ನಡೆದಿದೆ. ಮುಂಬೈ ಮೂಲದ ಸುಶಾಂತ ಅಗರವಾಲ್ ಎಂಬಾತ ಗುಂಡು ಹಾರಿಸಿದ್ದು, ಮತ್ತೊಂದು ಕಡೆಯವರನ್ನು ಹೆದರಿಸಲು ಫೈರಿಂಗ್ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಆರೋಪಿ ಸುಶಾಂತ ಮುಂಬೈನಲ್ಲಿದ್ದ ಎಂದು ತಿಳಿದುಬಂದಿದೆ. ನಿವೇಶನದ ಸಂಬಂಧ ಸುಶಾಂತ್ ಹಾಗೂ ಪವನ ಕುಲಕರ್ಣಿ ಮಧ್ಯೆ ಈ ಹಿಂದಿನಿಂದಲೂ ವಿವಾದ ನಡೆಯುತ್ತಿತ್ತು. ಇಬ್ಬರಿಗೆ ಸಂಬಂಧಿಸಿದ ಜಾಗವು ಅಕ್ಕಪಕ್ಕದಲ್ಲೇ ಇದ್ದು, ಇಂದು ಮತ್ತೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಆಗ ಸುಶಾಂತ ಗುಂಡು ಹಾರಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ವಿದ್ಯಾಗಿರಿ ಠಾಣೆ ಪೊಲೀಸರು ಸುಶಾಂತನನ್ನು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ಹುಬ್ಬಳ್ಳಿ - ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ ಎಂ. ವಿದ್ಯಾಗಿರಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿರುವುದಾಗಿ ಸುಶಾಂತ ಹೇಳುತ್ತಿದ್ದು, ಈ ಬಗ್ಗೆ ರಿವಾಲ್ವಾರ್ ಲೈಸೆನ್ಸ್ ಕುರಿತಂತೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: ಘಟನೆ ಕುರಿತಂತೆ ಮಾಹಿತಿ ನೀಡಿದ, ಹು-ಧಾ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ ಎಂ., ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಅತ್ತಿಕೊಳ್ಳದಲ್ಲಿ ಘಟನೆ ನಡೆದಿದೆ. ಸುಶಾಂತ ಅಗರವಾಲ್ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮಾಹಿತಿ ಪೊಲೀಸರಿಗೆ ಬಂದಿತ್ತು. ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಸುಶಾಂತ ಅಗರವಾಲ್ ಮತ್ತು ಪವನ ಕುಲಕರ್ಣಿ ಎಂಬುವರ ಮೊದಲಿನಿಂದಲೂ ಮಧ್ಯೆ ಭೂ ವಿವಾದ ಇದೆ. ಈ ಸಂಬಂಧ ಇವತ್ತು ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದರು.
ಈ ಎರಡೂ ಕಡೆಯ ಅಕ್ಕಪಕ್ಕದಲ್ಲಿಯೇ ಜಮೀನು ಇದೆ. ಕುಲಕರ್ಣಿ ಕಡೆಯವರು ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅಲ್ಲದೆ, ಸುಶಾಂತ ಕುಲಕರ್ಣಿಗೆ ಕೆಲಸ ಮಾಡದಂತೆ ಅವರು ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅವರು ಸುಶಾಂತ ಸಮೀಪಕ್ಕೆ ಬಂದಿದ್ದಾರೆ. ಇದರಿಂದ ಸುಶಾಂತ ಹೆದರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಸುಶಾಂತ ಭಯದಲ್ಲಿ ಫೈರ್ ಮಾಡಿದ್ದು, ಸದ್ಯ ವಿಚಾರಣೆ ಮುಂದುವರೆದಿದೆ ಎಂದು ಡಿಸಿಪಿ ರಾಜೀವ ಎಂ. ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Mysore crime:ಬಾಡಿಗೆ ಪಡೆದ ಟ್ರ್ಯಾಕ್ಟರ್ಗಳನ್ನು ಒತ್ತೆ ಇಟ್ಟು ವಂಚಿಸಿದ ಆರೋಪಿಯ ಬಂಧನ