ಹುಬ್ಬಳ್ಳಿ: ಅದು ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಹತ್ವದ ಯೋಜನೆ. ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆ ಕಾಮಗಾರಿ ವಿಳಂಬ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಪೂರ್ಣಗೊಂಡಿದ್ದರೂ ಪಾಲಿಕೆಗೆ ಹಸ್ತಾಂತರ ಮಾಡಿಲ್ಲ. ಇದು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳ ಹಸ್ತಾಂತರ ವಿಚಾರ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಎಡೆಮಾಡಿಕೊಟ್ಟಿದೆ. ಕಾಮಗಾರಿ ಮುಕ್ತಾಯವಾದರೂ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿವೆ.
ಈ ನಡುವೆ ಪೂರ್ಣಗೊಂಡ ಕಾಮಗಾರಿಗಳ ವರದಿ ಪರಿವೀಕ್ಷಣೆಗೆ ಮೇಯರ್ ಮತ್ತೊಂದು ತಂಡ ರಚಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಸ್ಮಾರ್ಟ್‌ಸಿಟಿ ಕಂಪನಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರಿಂದ ಹಸ್ತಾಂತರ ಕುರಿತಾಗಿ ಅಧಿಕಾರಿಗಳ ಲೆಕ್ಕಾಚಾರ ಬುಡಮೇಲಾಗಿದೆ.
ಹಲವಾರು ಪ್ರಾಜೆಕ್ಟ್ ಬಾಕಿ: ಏಕೆಂದರೆ ಸ್ಮಾರ್ಟ್‌ಸಿಟಿ ಕಂಪನಿ ನಿಯಮಾವಳಿ ಪ್ರಕಾರ, ಐದು ವರ್ಷದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿ ಸ್ಥಳೀಯ ಆಡಳಿತ ಪಾಲಿಕೆಗೆ ಹಸ್ತಾಂತರಿಸಬೇಕು. ಇದೀಗ ಐದು ವರ್ಷ ಅವಧಿ ಮುಗಿದಿದ್ದು, ಇನ್ನೂ ಯೋಜನೆಗಳನ್ನು ವಹಿಸಿಕೊಡಲು ಸಾಧ್ಯವಾಗುತ್ತಿಲ್ಲ. ಈಗ ಕೇವಲ 21 ಪ್ರಾಜೆಕ್ಟ್ ಗಳನ್ನು ಮಾತ್ರ ಪಾಲಿಕೆಗೆ ಹಸ್ತಾಂತರ ಮಾಡಿರುವ ಸ್ಮಾರ್ಟ್ ಸಿಟಿ ಇನ್ನೂ ಹಲವಾರು ಪ್ರಾಜೆಕ್ಟ್ ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ: ತಂದೆ, ಚಿಕ್ಕಪ್ಪನನ್ನು ಕಳೆದುಕೊಂಡರೂ ಯುಪಿಎಸ್ಸಿ ಹಠ ಬಿಡದ ಚತುರೆ: ಕರ್ನಾಟಕದ ಅಗ್ರ ರ್‍ಯಾಂಕರ್ ಮನದಾಳವಿದು!
ಇನ್ನು ಸ್ಮಾರ್ಟ್‌ಸಿಟಿ ಕಂಪನಿ ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಇಷ್ಟೊತ್ತಿಗೆ ಪೂರ್ಣಗೊಂಡ ಕಾಮಗಾರಿಗಳನ್ನು ಪಾಲಿಕೆಗೆ ವಹಿಸಬೇಕಿತ್ತು. ಸ್ಮಾರ್ಟ್‌ಸಿಟಿ ಕಂಪನಿಯು 823 ಕೋಟಿ ರೂ. ವೆಚ್ಚದಲ್ಲಿ 55 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಇವುಗಳನ್ನು ಸ್ಮಾರ್ಟ್‌ಸಿಟಿ, ಪಾಲಿಕೆ ಎಂಜಿನಿಯರ್‌ಗಳು ಹಾಗೂ ನಿಯೋಜಿತ ಮೂರನೇ ವ್ಯಕ್ತಿಯ ಒಳಗೊಂಡು ಜಂಟಿಯಾಗಿ ಸಮೀಕ್ಷೆ ಕೈಗೊಂಡು ಕಾಮಗಾರಿಗಳು ನಿಗದಿತ ವಿಸ್ತೃತ ಯೋಜನಾ ವರದಿ(ಡಿಪಿಆರ್), ವಿನ್ಯಾಸ, ಗುಣಮಟ್ಟ, ನಿರ್ದಿಷ್ಟ ಅಳತೆ ಸೇರಿದಂತೆ ಮೂಲ ಅಂಶಗಳನ್ನು ಪರಿಶೀಲಿಸಿ ಸಮಗ್ರ ವರದಿ ತಯಾರಿಸಬೇಕು.
ಕಾಮಗಾರಿಯಲ್ಲಿ ನೂನ್ಯತೆ, ಕಳಪೆ ಕಂಡುಬಂದಲ್ಲಿ ಅಂತಹ ಕಾಮಗಾರಿಗಳನ್ನು ಪುನಃ ಸರಿಪಡಿಸಿಕೊಡಲು ಅವಕಾಶ ನೀಡಲಾಗುತ್ತದೆ. ತದನಂತರ ಅವುಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗುತ್ತದೆ. ಹೀಗಿದ್ದರೂ ಕೂಡ ವಿಳಂಬವಾಗುತ್ತಿರುವುದು ಹಲವು ಅನುಮಾನ ಮೂಡಿಸಿದೆ.
ಇದನ್ನೂ ಓದಿ: ಲಂಚ ಸ್ವೀಕರಿಸುತ್ತಿದ್ದ ಶಿವಾಜಿನಗರ ಠಾಣಾ ಮಹಿಳಾ ಪಿಎಸ್ಐ ಲೋಕಾಯುಕ್ತ ಬಲೆಗೆ
ವಿಳಂಬವಾಗುತ್ತಿರುವುದು ವಿಪರ್ಯಾಸಕರ ಸಂಗತಿ: ಒಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಒಂದಿಲ್ಲೊಂದು ನ್ಯೂನ್ಯತೆಗಳಿಂದ ಬಳಲುತ್ತಿದ್ದು, ಎಲ್ಲ ಯೋಜನೆ ಸಾರ್ವಜನಿಕರಿಗೆ ಮುಕ್ತವಾಗಲು ಸಾಕಷ್ಟು ವಿಳಂಬವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅದು ಏನೇ ಇರಲಿ, ಯೋಜನೆ ಮಹತ್ವವನ್ನು ಕಳೆದುಕೊಳ್ಳುವ ಮೊದಲು ಜನರಿಗೆ ಮುಕ್ತವಾಗಲಿ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರ ಕೊಲೆ ಮಾಡಿದ್ದಾರೆ ಎಂಬ ಆರೋಪ: ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು