ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ನಂತರ ಹೋಟೆಲ್ ಸಿಬ್ಬಂದಿಯಲ್ಲಿ ಆತಂಕ ಇನ್ನೂ ದೂರವಾಗಿಲ್ಲ. ಈ ಹಿನ್ನೆಲೆ ಅವರ ಹತ್ಯೆ ನಡೆದ ಸ್ಥಳದಲ್ಲಿ ಮತ್ತೆ ಹೋಮ-ಹವನವನ್ನು ನೆರವೇರಿಸಲಾಗಿದೆ. ನಗರದ ಉಣಕಲ್ ಕೆರೆಯ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ನಿನ್ನೆ ಮತ್ತು ಇಂದು ಪೂಜೆ, ಹೋಮ-ಹವನ, ಯಜ್ಞವನ್ನು ಶಾಸ್ತ್ರಿಗಳು ನಡೆಸಿದರು. ಅಘೋರ ಹೋಮ, ಉದಕ ಶಾಂತಿ, ಸುದರ್ಶನ ಹೋಮ, ಗೋ ಪೂಜೆ, ಅಕಲಾ ಪೂಜೆ ನೆರವೇರಿಸಿದರು.
ಸರಳ ವಾಸ್ತು ತಜ್ಞ ಕೊಲೆಗೀಡಾಗಿದ್ದನ್ನು ಅಪಶಕುನ ಎಂದು ಭಾವಿಸಿರುವ ಹೋಟೆಲ್ ಮ್ಯಾನೇಜ್ಮೆಂಟ್ ಸಿಬ್ಬಂದಿಯಲ್ಲಿ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಗ್ರಾಹಕರಲ್ಲಿನ ಅಂಜಿಕೆ ಹಾಗೂ ಅಳಕು ತೊಡೆದು ಹಾಕಲು ಯತ್ನಿಸುತ್ತಿದ್ದಾರೆ. ಗುರೂಜಿ ಹತ್ಯೆಯ ನಂತರ ಹೋಟೆಲ್ನ ಗ್ರಾಹಕರ ಸಂಖ್ಯೆ ಗಣನೀಯ ಕುಸಿತವಾಗಿದೆಯಂತೆ.
ಹೋಟೆಲ್‌ನಲ್ಲಿ ಈವರೆಗೆ ಬುಕ್ ಆಗಿದ್ದ ಮದುವೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳು ಕೂಡ ರದ್ದಾಗಿವೆ. ಇದರಿಂದ ಹೋಟೆಲ್ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆಯಂತೆ. ಹೀಗಾಗಿ, ಹೋಟೆಲ್ ಮಾಲೀಕರು ಹಾಗೂ ಆಡಳಿತ ಮಂಡಳಿಯವರು ಪೂಜೆಯ ಮೊರೆ ಹೋಗಿದ್ದಾರೆ.
ಓದಿ: ಕೈದಿಗಳ ದಿನಗೂಲಿ ಹೆಚ್ಚಳ ಮಾಡಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟೀಕರಣ