ಹುಬ್ಬಳ್ಳಿ: ಪೌರತ್ವ ಕಾಯ್ದೆ ಸ್ವಾಗತಾರ್ಹವಾಗಿದ್ದು, ಕಾಂಗ್ರೆಸ್ ಕುಮ್ಮಕ್ಕಿನಿಂದ ಕೆಲವರು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಈ ಕಾಯ್ದೆಯಿಂದಾಗಿ ಇಲ್ಲಿನ ಮುಸ್ಲಿಂ ಸಮುದಾಯದವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಕಾಂಗ್ರೆಸ್ನವರು ಮುಸ್ಲಿಮರನ್ನು ಎತ್ತಿಕಟ್ಟಿ ದಂಗೆ, ಗಲಾಟೆ ಮಾಡಿಸುತ್ತಿದ್ದಾರೆ. 50 ವರ್ಷದಿಂದ ಕಾಂಗ್ರೆಸ್ ಮುಸ್ಲಿಮರ ಅಭಿವೃದ್ದಿಗೆ ಏನೂ ಮಾಡಿಲ್ಲ. ಈಗ ಮತ್ತೆ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಪೌರತ್ವ ಕಾಯ್ದೆ ಜಾರಿಗೆ ತಂದರೆ ಬೆಂಕಿ ಹಚ್ಚುವುದಾಗಿ ಯು.ಟಿ. ಖಾದರ್ ಹೇಳಿಕೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಖಾದರ್ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ. ಹಾಗಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದೇ ತಿಂಗಳು 21 ರಂದು ರಾಜ್ಯಾದ್ಯಂತ ಕೇಂದ್ರ ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುವ ಮೂಲಕ, ಕೂಡಲೇ ಕಾಯ್ದೆ ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಿರ್ಭಯ ಅತ್ಯಾಚಾರ ಆರೋಪಿಗಳಿಗೆ ತಡವಾಗಿಯಾದ್ರೂ ಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿದ್ದು ಸ್ವಾಗತಾರ್ಹ. ಶಿಕ್ಷೆ ನೀಡಲು 7 ವರ್ಷ ಕಳೆದುಹೋಗಿದ್ದು, ಅದರ ನಡುವೆ ಸಾಕಷ್ಟು ಅತ್ಯಾಚಾರಗಳಾಗಿವೆ ಎಂದು ಕಳವಳ ವ್ಯಕ್ತಪಡಿಸಿದ್ರು.
ನ್ಯಾಯಾಲಯ ಇಂತಹ ಪ್ರಕರಣಗಳಲ್ಲಿ ತೀರ್ಪು ನೀಡಲು ವಿಳಂಬ ಮಾಡಬಾರದು. ಇಂತವರನ್ನು ಎನ್ಕೌಂಟರ್ ಮಾಡುವುದೇ ಸರಿ ಅನಿಸುತ್ತದೆ ಎಂದರು.