ಹುಬ್ಬಳ್ಳಿ: ತೃತೀಯ ಶಕ್ತಿಗಳು ಒಂದಾಗಲು ಪ್ರಯತ್ನ ನಡೆಸಿವೆ. ಕೇಂದ್ರದಲ್ಲಿ ರಚನೆಯಾಗುತ್ತಿರುವುದು ತೃತೀಯ ರಂಗವಲ್ಲ, ಅದು ಥರ್ಡ್ ಕ್ಲಾಸ್ ಫ್ರಂಟ್. ಅವರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅವರೆಲ್ಲಾ ಒಂದಾಗುವುದು ಅನುಮಾನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, 'ತೃತೀಯ ಶಕ್ತಿಗಳು ಬಹಳ ದಿನದಿಂದ ಒಂದಾಗಲು ಪ್ರಯತ್ನ ನಡೆಸಿವೆ. ಕಾಂಗ್ರೆಸ್‌ನವರು ತೃತೀಯ ರಂಗ ಹುಟ್ಟು ಹಾಕ್ತಾರೆ ಅಂತಾ ಇದ್ದಾರೆ. ಆದರೆ, ಉದಾತ್ತವಾದ ಉದ್ದೇಶವಿದ್ದಿದ್ದರೆ ಅವರು ಒಂದಾಗುತ್ತಿದ್ದರು. ನಾನು ಏನಾದರೂ ಮಾಡಿ ಪ್ರಧಾನಿ ಆಗಬೇಕೆಂದು ಬಡಿದಾಡುತ್ತಿದ್ದಾರೆ. ಹೀಗಾಗಿ, ಅವರು ಒಂದಾಗುವುದಕ್ಕೆ ಸಾಧ್ಯವೇ ಇಲ್ಲ' ಎಂದರು.
ಮಠಾಧೀಶರು ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು, 'ಮಠಾಧೀಶರು, ಮಠಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಗಳು ರಾಜಕಾರಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಮಠಾಧೀಶರು ರಾಜಕಾರಣಕ್ಕೆ ಬರುತ್ತಿರುವ ಕುರಿತು ನನಗೆ ಗೊತ್ತಿಲ್ಲ' ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್‌ನವರು ಹೇಳಿದ್ದನ್ನು ಮಾಡಿದ್ದಾರಾ? ಸುಳ್ಳು ಅವರ DNAಯಲ್ಲೇ ಇದೆ: ಸಚಿವ ಜೋಶಿ
ಕೋವಿಡ್ 19 ವ್ಯಾಕ್ಸಿನ್ ಅಡ್ಡ ಪರಿಣಾಮದ ಕುರಿತು ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, 'ಹಾಗೊಂದು ವೇಳೆ ಅಡ್ಡ ಪರಿಣಾಮಗಳು ಆಗ್ತಿದ್ದರೆ ಈಗಾಗಲೇ ಜನ ದಂಗೆ ಏಳುತ್ತಿದ್ದರು. ಈ ರೀತಿಯ ಹೇಳಿಕೆ ನೀಡಿ ವ್ಯಾಕ್ಸಿನ್ ಕಂಡು ಹಿಡಿದ ತಜ್ಞರನ್ನು ರಾಹುಲ್ ಗಾಂಧಿ ಅಪಮಾನಿಸುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತಿದ್ದೇನೆ. ಲಿಂಗಾಯತ, ವೀರಶೈವರು ಬಿಜೆಪಿ ಜೊತೆಗಿರಬೇಕೆಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಅವರು ತಪ್ಪೇನು ಮಾತನಾಡಿಲ್ಲ, ಸರಿಯಾಗಿಯೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ದೇವೇಗೌಡ ಕುಟುಂಬದ ಬಗ್ಗೆ ಕಟೀಲ್ ಆಕ್ಷೇಪಾರ್ಹ ಹೇಳಿಕೆ: ಹೆಚ್ಡಿಕೆ ಗರಂ
ಹಾಸನದಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ದೇವೇಗೌಡರ ಮನೆಯಲ್ಲಿ ಉಂಟಾಗಿರುವ ಭಿನ್ನಮತ ವಿಚಾರವಾಗಿ, ಮನೆಯನ್ನು ಮ್ಯಾನೇಜ್ ಮಾಡಲಾಗದವರು ರಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತೆ?. ಇದಕ್ಕೆ ಮೊದಲು ಹೆಚ್.ಡಿ ಕುಮಾರಸ್ವಾಮಿಯವರು ಸಮಜಾಯಿಷಿ ನೀಡಲಿ. ಮನೆಯಲ್ಲಿರುವ ಎಲ್ಲರಿಗೂ ಟಿಕೆಟ್ ಕೊಟ್ಟ ಮೇಲೆ ಮತ್ತೇಕೆ ಕಿತ್ತಾಟ ನಡೆಸಿದ್ದಾರೆ. ಮೊದಲು ನಿಮ್ಮ ಮನೆ ಸರಿ ಮಾಡಿಕೊಂಡು ನಂತರ ಚುನಾವಣೆಗೆ ಸ್ಪರ್ಧಿಸಿ ಎಂದು ಜೋಶಿ ಸವಾಲು ಹಾಕಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಆರೋಪ, ಈ ಬಾರಿ ರಾಹುಲ್ ಗಾಂಧಿ ವಿರುದ್ಧ ಕ್ರಮ; ಪ್ರಹ್ಲಾದ್ ಜೋಶಿ