ಧಾರವಾಡ: ಸ್ವಾತಂತ್ರ್ಯ ಸಿಕ್ಕಿದ ನಂತರದ 77 ವರ್ಷಗಳಲ್ಲಿ 75 ವರ್ಷ ದೇಶವನ್ನು ಆಳಿ ನಾವಿನ್ನೂ ಕರೆಂಟ್ ಕೊಡ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಇಷ್ಟು ದಿನ ಇವರು ಏನು ಕಾಯ್ತಿದ್ರು ಎಂದು ಪ್ರಹ್ಲಾದ್ ಜೋಶಿ ಟೀಕಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ 5 ಕೆಜಿ ಅಕ್ಕಿ ಕೊಡುತ್ತಿದೆ. ಅದನ್ನು 10 ಕೆಜಿ ಕೊಡ್ತೀವಿ, 20 ಕೆಜಿ ಕೊಡ್ತೀವಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಸುಳ್ಳು ಹೇಳೋರಿಗೆ ಏನು ಹೇಳೋದು, ಕಾಂಗ್ರೆಸ್‌ನವರು ಹೇಳಿದ್ದನ್ನು ಮಾಡಿದ್ದಾರಾ? ಎಂದು ಕೇಳಿದರು.
ಗರೀಬಿ ಹಠಾವ್ ಅಂದಿದ್ರು. ರೋಟಿ, ಕಪಡಾ, ಮಕಾನ್ ಅಂದಿದ್ರು. ಅವೆಲ್ಲ ಆಗಿದ್ದಾವಾ? ಅವೆಲ್ಲ ಆಗಿದ್ರೆ ಇವತ್ತು ಯಾಕೆ 10 ಕೆಜಿ ಅಕ್ಕಿ ಕೊಡ್ತಿದ್ರು. ಕಾಂಗ್ರೆಸ್ ಪಾರ್ಟಿ ಅಂದ್ರೆ ಸುಳ್ಳು ಹೇಳುವ ನಿಸ್ಸೀಮರ ಪಾರ್ಟಿ ಎಂದು ಟೀಕಿಸಿದರು.
ಪ್ರತಾಪ್ ಸಿಂಹ ತಾಲಿಬಾನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ನದ್ದು ತುಷ್ಠೀಕರಣದ ರಾಜಕಾರಣ. ಹೀಗಾಗಿ ಅದೇ ಅರ್ಥದಲ್ಲಿ ಹೇಳಿರಬಹುದು. ಮಹದಾಯಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿ ಸರ್ಕಾರ ಮತ್ತೊಮ್ಮೆ ರಾಜ್ಯಕ್ಕೆ ಕೊಡುಗೆ ಕೊಟ್ಟಿದೆ. ಈ ಹಿಂದೆ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲ ಅಂತ ಕಾಂಗ್ರೆಸ್‌ನವರು ಹೇಳಿದ್ರು. 3 ರಾಜ್ಯಗಳಿಗೂ ಹೆಚ್ಚು ನೀರು ಹೋಗಬಾರದು ಅಂತ ಮ್ಯಾನೇಜ್ಮೆಂಟ್ ಅಥಾರಿಟಿ ಮಾಡ್ತಿದೆ. ಇನ್ನು ಸ್ವಲ್ಪ ದಿನದಲ್ಲೇ ನೀರು ಹಂಚಿಕೆ ಆಗುತ್ತೆ ಎಂದರು.
ಮದ್ಯಪಾನ ವಯೋಮಿತಿ ಕಡಿಮೆ ಮಾಡೋ ವಿಚಾರಕ್ಕೆ ಮಾತನಾಡಿ, ಸಿಎಂ ಈ ಬಗ್ಗೆ ಪ್ರಸ್ತಾವನೆ ಇಲ್ಲ ಅಂತ ಹೇಳಿದ್ದಾರೆ ಎಂದು ತಿಳಿಸಿದರು. ಇನ್ನು ಯಡಿಯೂರಪ್ಪ ಕೊನೆಯ ವಿದಾಯ ಭಾಷಣ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ನಮ್ಮ ಹಿರಿಯ, ಜನಪ್ರಿಯ ನಾಯಕರು. ಅವರು ತಮ್ಮ ಸೇವೆಯನ್ನು ಯಾವತ್ತೂ ಪಕ್ಷಕ್ಕೆ ನೀಡುತ್ತೇನೆ ಅಂತ ಹೇಳಿದ್ದಾರೆ. ಅವರನ್ನು ಸದಾ ಕಾಲ ಉಪಯೋಗ ಮಾಡಿಕೊಳ್ಳುತ್ತೇವೆ. ಅವರಿಗೆ ಓಡಾಡಲು ದೇವರು ಹೆಚ್ಚಿನ ಶಕ್ತಿ ಕೊಡಲಿ, ಅವರ ಜನಪ್ರಿಯತೆ ಶಕ್ತಿಯನ್ನು ನಾವು ಬಳಸಿಕೊಳ್ಳುತ್ತೇವೆ ಎಂದರು.
ಮಾರ್ಚ್ 11 ರಂದು ಧಾರವಾಡದ ಐಐಟಿ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಹಲವು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: ಆಧಾರ ರಹಿತ ಆರೋಪ ಸಿಎಂಗೆ ಶೋಭೆ ತರಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ