ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರ ಪೌರತ್ವವನ್ನು ಸಹ ಕಸಿದುಕೊಳ್ಳಲಾಗುವುದಿಲ್ಲ. ಪೌರತ್ವ ಕಾಯಿದೆ ಹೆಸರಿನಲ್ಲಿ ಕಾಂಗ್ರೆಸ್ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ದುಷ್ಟ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಜೋಶಿ, ಯಾರ ಪೌರತ್ವ ಕಸಿದುಕೊಳ್ಳುವ ವಿಚಾರವಿಲ್ಲ. ನಮ್ಮ ದೇಶಕ್ಕೆ ಹೊಂದಿಕೊಂಡಿರುವ ಜನರಿಗೆ, ಪೌರತ್ವ ನೀಡಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ಇಸ್ಲಾಮಿಕ್ ಬಾಂಧವರನ್ನು ದೇಶದಿಂದ ಹೊರಹಾಕುವ ಪ್ರಶ್ನೆಯೇ ಇಲ್ಲ. ಇದನ್ನು ಕಾಂಗ್ರೆಸ್ ದೇಶದಲ್ಲಿ ಗಲಬೆ ಎಬ್ಬಿಸುವ ಪ್ರಯತ್ನ ಮಾಡುತ್ತಿದೆ ಎಂದರು. ಇನ್ನೂ ಚಳಿಗಾಲದ ಸಂಸತ್ ಅಧಿವೇಶನ ಯಶಸ್ವಿಯಾಗಿ ಅಂತ್ಯವಾಗಿದ್ದು, ಕೆಲವು ಐತಿಹಾಸಿಕ ಕಾನೂನುಗಳ ಬಿಲ್ ಪಾಸ್ ಮಾಡಲಾಗಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳು ಸಹಿಸುತ್ತಿಲ್ಲ ಎಂದರು.
ಕಾಂಗ್ರೆಸ್ನ ರಾಹುಲ್ ಗಾಂಧಿ ಯಾವತ್ತು ಸಾವರ್ಕರ್ ಆಗಲು ಸಾಧ್ಯವಿಲ್ಲ, ಆದ್ರೆ ಠಾಕ್ರೆ ಆಗಬಹುದು. ಅವರು ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ದೇಶಭಕ್ತ ವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು. ಕಾಂಗ್ರೆಸ್ನಲ್ಲಿ ನಕಲಿ ಗಾಂಧಿಗಳೇ ಇದ್ದು, ಅವರಲ್ಲಿ ರಾಹುಲ್, ಸೋನಿಯಾ, ಪ್ರಿಯಾಂಕ, ವಾದ್ರಾ ಸೇರಿದ್ದಾರೆ. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧರು, ಅವರು ಕಾಂಗ್ರೆಸ್ ಪಕ್ಷವನ್ನು ಅಂತ್ಯ ಮಾಡಲಿಕ್ಕಾಗಿಯೇ ಈ ರೀತಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ದೇಶದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ರಾಜಕಾರಣ ಇಲ್ಲ. ಇದನ್ನು ಎಲ್ಲರೂ ಒಟ್ಟಾಗಿ ಖಂಡಿಸಬೇಕು. ದೇಶದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕಾನೂನು ಮಾಡಲಾಗಿದ್ದು, ಆಯಾ ರಾಜ್ಯ ಸರ್ಕಾರಗಳು ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಬೇಕೆಂದರು. ಇನ್ನೂ ಪಾಕಿಸ್ತಾನ ಹಾಗೂ ಇನ್ನಿತರ ದೇಶಗಳು ನಮ್ಮ ದೇಶದ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲ, ನಮ್ಮ ದೇಶ ಸುರಕ್ಷಿತವಾಗಿದೆ. ದೇಶದ ಮೇಲೆ ಒಂದು ಬಾರ್ಡರ್ ಇರಬೇಕು ಯಾರು ಬೇಕಾದ್ರೂ ಬಂದು ಇರಲು ಇದೇನು ಧರ್ಮ ಛತ್ರನಾ ಎಂದು ಕಿಡಿಕಾರಿದರು.